ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ಬೌಲರ್ ಶಾಹೀನ್ ಶಾ ಆಫ್ರಿದಿ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಶಾಹೀನ್, ಪಾಕ್ ತಂಡದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಅವರ ಪುತ್ರಿ ಅನ್ಷಾ ಜೊತೆ ನಿಕಾಹ್ ಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಈಗಾಗ್ಲೇ ಮದುವೆ ದಿನಾಂಕ ಕೂಡ ಫಿಕ್ಸ್ ಆಗಿದೆ. ಅನ್ಷಾ, ಆಫ್ರಿದಿಯ ಹಿರಿಯ ಪುತ್ರಿ.
ಶಾಹೀನ್ ಶಾ ಹಾಗೂ ಅನ್ಷಾ ಜೋಡಿ ಫೆಬ್ರವರಿ 3 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಶಾಹೀನ್ಗೆ ಈ ಹಿಂದೆಯೇ ನಿಶ್ಚಿತಾರ್ಥವಾಗಿತ್ತು. ಎರಡು ವರ್ಷಗಳ ಹಿಂದೆ ಆಫ್ರಿದಿ ಪುತ್ರಿ ಅನ್ಷಾ ಹಾಗೂ ಶಾಹಿನ್ ಎಂಗೇಜ್ಮೆಂಟ್ ನೆರವೇರಿತ್ತು. ಮದುವೆ ಕುರಿತಂತೆ ಖುದ್ದು ಆಫ್ರಿದಿ ಅಧಿಕೃತ ಹೇಳಿಕೆಯನ್ನೂ ನೀಡಿದ್ದಾರೆ. ಪಾಕಿಸ್ತಾನದ ಕರಾಚಿಯಲ್ಲಿ ಮದುವೆ ಸಮಾರಂಭ ನೆರವೇರಲಿದೆ. ಆರತಕ್ಷತೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ.
ಶಾಹೀನ್ ಶಾ ಅಫ್ರಿದಿ ಪಾಕಿಸ್ತಾನ ತಂಡದ ಪ್ರಮುಖ ಬೌಲರ್. ಇದುವರೆಗೆ 25 ಟೆಸ್ಟ್, 32 ODI ಮತ್ತು 47 T20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 99, ಏಕದಿನದಲ್ಲಿ 62 ಮತ್ತು ಟಿ20ಯಲ್ಲಿ 58 ವಿಕೆಟ್‌ಗಳನ್ನು ಪಡೆದಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ಹ್ಯಾರಿಸ್ ರೌಫ್ ಕೂಡ ಮದುವೆಗೆ ಸಜ್ಜಾಗಿದ್ದಾರೆ. ತಮ್ಮ ಸಹಪಾಠಿಯೊಂದಿಗೆ ಇದೇ ತಿಂಗಳ 26ಕ್ಕೆ ಹ್ಯಾರಿಸ್ ಹೊಸ ಜೀವನಕ್ಕೆ ಕಾಲಿಡಲಿದ್ದಾರಂತೆ. ಹ್ಯಾರಿಸ್ ಮನೆಯಲ್ಲಿ ಈಗಾಗಲೇ ಮದುವೆಯ ಶಾಸ್ತ್ರಗಳು ಪ್ರಾರಂಭವಾಗಿವೆ.