ನಿವೃತ್ತ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ಗೆ ಪಿಂಚಣಿ ನೀಡಲು ಸಹಾಯ ಮಾಡುವ ನೆಪದಲ್ಲಿ ಸರ್ಕಾರದ ಖಜಾನೆ ಅಧಿಕಾರಿ ಎಂದು ಹೇಳಿಕೊಂಡು ಸೈಬರ್ ದರೋಡೆಕೋರನೊಬ್ಬ 8.50 ಲಕ್ಷ ರೂ. ದೋಚಿದ್ದಾನೆ. ಉತ್ತರಪ್ರದೇಶದ ನೋಯ್ಡಾದ ಸೆಕ್ಟರ್ 36 ರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್‌ಐಆರ್ ದಾಖಲಿಸಿದ್ದು ಪೊಲೀಸರು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ನವೆಂಬರ್ 21 ರಂದು ನನಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು. ಆ ವ್ಯಕ್ತಿ ತನ್ನನ್ನು ಸಹರಾನ್‌ಪುರದ ಖಜಾನೆ ಅಧಿಕಾರಿ ಎಂದು ಹೇಳಿಕೊಂಡಿದ್ದ. ನಿಮ್ಮ ಪಿಂಚಣಿಯನ್ನು ಸಹರಾನ್‌ಪುರಕ್ಕೆ ವರ್ಗಾಯಿಸಲು ನೀವು ಅರ್ಜಿ ಸಲ್ಲಿಸಿದ್ದೀರಿ ಎಂದಿದ್ದ. ಈ ವೇಳೆ ನನ್ನ ವೃತ್ತಿಪರ ದಾಖಲೆಗಳ ಬಗ್ಗೆ ಸಾಕಷ್ಟು ವಿವರಗಳನ್ನು ನಾನು ಹಂಚಿಕೊಂಡಿದ್ದೆ. ಅವನು ನಿಜವಾಗಿಯೂ ತಾನೊಬ್ಬ ಸರ್ಕಾರಿ ಅಧಿಕಾರಿ ಎಂದು ನನಗೆ ಮನವರಿಕೆ ಮಾಡಿಕೊಟ್ಟಿದ್ದ ಎಂದು ಜುಲೈ 31 ರಂದು ಪೊಲೀಸ್ ಸೇವೆಯಿಂದ ನಿವೃತ್ತರಾಗಿರುವ ದೂರುದಾರ ಬಿಜೇಂದ್ರ ಸಿಂಗ್ ಮಲಿಕ್ ಅವರು ದೂರಿನಲ್ಲಿ ಹೇಳಿದ್ದಾರೆ.
ಮಲಿಕ್ ಪ್ರಸ್ತುತ ಗೌತಮ್ ಬುದ್ಧ ನಗರದ ಪೊಲೀಸ್ ಲೈನ್‌ನಲ್ಲಿ ವಾಸಿಸುತ್ತಿದ್ದು ಅವರು ಮೂಲತಃ ಸಹರಾನ್‌ಪುರ ಜಿಲ್ಲೆಯವರು.
ಕರೆ ಮಾಡಿದ ವ್ಯಕ್ತಿಯು ನನ್ನ ಪಿಂಚಣಿಯ ಫೈಲ್ ಅನ್ನು ಸಿದ್ಧಪಡಿಸುತ್ತಿದ್ದೇನೆ ಅದನ್ನು ಪೂರ್ಣಗೊಳಿಸಲು ನನ್ನ ಫೋನ್ ಸಂಖ್ಯೆಗೆ OTP ಕಳುಹಿಸುತ್ತೇನೆ, ನಾನು ಅದನ್ನು ಅವನೊಂದಿಗೆ ಹಂಚಿಕೊಳ್ಳಬೇಕು ಎಂದು ಹೇಳಿದ್ದ. ಅವರು ಫೋನ್ ಮೂಲಕ ಕೇಳಿದ OTP ಮತ್ತು ಇತರ ಕೆಲವು ವಿವರಗಳನ್ನು ನಾನು ತಿಳಿಸಿದ್ದೆ. ಸ್ವಲ್ಪ ಸಮಯದ ನಂತರ ನನ್ನ ಖಾತೆಯಿಂದ ಎರಡು ಕಂತುಗಳಲ್ಲಿ 8.62 ಲಕ್ಷ ರೂಪಾಯಿ ಹಿಂಪಡೆಯಲಾಗಿದೆ ಎಂದು ನನಗೆ ಸೂಚನೆ ಬಂದಿತು ಎಂದು ನಿವೃತ್ತ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ವಂಚನೆ), 419 (ಸೋಗು ಹಾಕುವ ಮೂಲಕ ವಂಚನೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರೀತಾ ಯಾದವ್ ಹೇಳಿದ್ದಾರೆ.
ಇದೇ ವೇಳೆ, ಸಾರ್ವಜನಿಕರು ತಮ್ಮ ವೈಯಕ್ತಿಕ ಅಥವಾ ಬ್ಯಾಂಕ್‌ಗೆ ಸಂಬಂಧಿಸಿದ ಮಾಹಿತಿಯನ್ನು ಫೋನ್ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ವಿಶೇಷವಾಗಿ ಅಪರಿಚಿತರೊಂದಿಗೆ ಹಂಚಿಕೊಳ್ಳುವಾಗ ಜಾಗರೂಕರಾಗಿರಿ ಎಂದು ಇನ್‌ಸ್ಪೆಕ್ಟರ್ ಎಚ್ಚರಿಸಿದ್ದಾರೆ.