ಬೆಳಗಾವಿ: ಸಾವರ್ಕರ್ ಫೋಟೋ ವಿರುದ್ಧದ ಹೋರಾಟದಿಂದ ಕಾಂಗ್ರೆಸ್ ಹಿಂದೆ ಸರಿದಿದೆ. ಸಿಎಲ್ಪಿ ಸಭೆಯಲ್ಲಿ ಸಾವರ್ಕರ್ ವಿರುದ್ಧದ ಹೋರಾಟದಿಂದ ಹಿಂದೆ ಸರಿಯಲು ತೀರ್ಮಾನ ಕೈಗೊಳ್ಳಲಾಗಿದೆ.
ಸಾವರ್ಕರ್ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ವಿಷಯಾಂತರ ಮಾಡಲು ಪ್ರಯತ್ನಿಸುತ್ತಿದೆ. ಹೀಗಾಗಿ, ಯಾವುದೇ ಕಾರಣಕ್ಕೂ ಸಾವರ್ಕರ್ ವಿರುದ್ಧದ ಹೋರಾಟಕ್ಕೆ ಕೈ ಹಾಕಬಾರದು. ಉತ್ತರ ಕರ್ನಾಟಕದ ಸಮಸ್ಯೆ ಹೊರತುಪಡಿಸಿ ಬೇರೆ ವಿಚಾರ ಮಾತನಾಡಬಾರದು ಎಂದು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ರೈತರ ಸಮಸ್ಯೆಯ ಬಗ್ಗೆ ಇಂದು ನಿಲುವಳಿ ಸೂಚನೆ ಮಂಡಿಸಲು ತೀರ್ಮಾನಿಸಲಾಗಿದೆ. ಉಭಯ ಸದನಗಳಲ್ಲಿ ನಿಲುವಳಿ ಸೂಚನೆ ಮಂಡಿಸಲು ಕಾಂಗ್ರೆಸ್ ನಿರ್ಧರಿಸಿದ್ದು, ಕಬ್ಬು ಬೆಳೆಗಾರರ ಹೋರಾಟ, ಬೆಂಬಲ ಬೆಲೆ, ಬೆಳೆ ಹಾನಿ ಪರಿಹಾರ, ಆನೆ, ಚಿರತೆ ದಾಳಿ ಮತ್ತಿತರ ವಿಷಯಗಳ ಬಗ್ಗೆ ಪ್ರಸ್ತಾಪಿಸಲು ತೀರ್ಮಾನಿಸಲಾಗಿದೆ.
ಗಡಿ ವಿವಾದ ಸಂಬಂಧ ನಿಲುವಳಿ ವಿಧಾನ ಪರಿಷತ್ ನಲ್ಲಿ ನಿಲುವಳಿ ಸೂಚನೆ ಮಂಡನೆಗೆ ಸಭೆಯಲ್ಲಿ ನಿರ್ಧರಿಸಲಾಗಿದೆ. ಮತದಾರರ ಪಟ್ಟಿ ಲೋಪ, ಶೇಕಡ 40ರಷ್ಟು ಕಮಿಷನ್, ಪೇಸಿಎಂ, ನೇಮಕಾತಿ ಹಗರಣದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲು ಕಾಂಗ್ರೆಸ್ ನಿರ್ಧರಿಸಿದೆ.
ಕೃಷ್ಣಾ, ಮಹದಾಯಿ, ಮೇಕೆದಾಟು ನೀರಾವರಿ ಯೋಜನೆ ವಿಳಂಬ, ತೊಗರಿ, ಕಬ್ಬು ಬೆಳೆಗಾರರ ಸಮಸ್ಯೆ, ತೊಗರಿ ಬೆಳೆ ರೋಗದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ತೀರ್ಮಾನ ಕೈಗೊಂಡಿದೆ.
ರಾಜ್ಯ ಪ್ರವಾಸದ ಬಗ್ಗೆಯೂ ಕಾಂಗ್ರೆಸ್ ನಾಯಕರು ಸುಧೀರ್ಘ ಚರ್ಚೆ ನಡೆಸಿದ್ದು ಯಾತ್ರೆಯ ಸ್ವರೂಪದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.