ಬೆಂಗಳೂರು: ಡಿಸೆಂಬರ್ 21 ರಿಂದ ಸರ್ಕಾರಿ ಪದವಿ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ಆರಂಭಿಸಲು ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ.
ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ವರ್ಗಾವಣೆ ಕೈಗೊಳ್ಳುವುದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ ಎಂದು ಬೋಧಕರು, ಪೋಷಕರು ವಿರೋಧ ವ್ಯಕ್ತಪಡಿಸಿದ್ದು, ಇದನ್ನು ಲೆಕ್ಕಿಸದೇ ಕೌನ್ಸೆಲಿಂಗ್ ಗೆ ಚಾಲನೆ ನೀಡಲಾಗಿದೆ ಎಂದು ಹೇಳಲಾಗಿದೆ.
ರಾಜ್ಯದ 430 ಸರ್ಕಾರಿ ಪದವಿ ಕಾಲೇಜುಗಳಲ್ಲಿ 9 ಸಾವಿರಕ್ಕೂ ಅಧಿಕ ಕಾಯಂ ಬೋಧಕ ಸಿಬ್ಬಂದಿ ಇದ್ದಾರೆ.ಒಟ್ಟು ಸಂಖ್ಯೆಯ ಶೇಕಡ 15 ರಷ್ಟು ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಡಿಸೆಂಬರ್ 21ರಿಂದ 24ರ ವರೆಗೆ ಕೌನ್ಸಿಲಿಂಗ್ ನಡೆಯಲಿದೆ.
ವಿಕಲಚೇತನರು, ತೀವ್ರ ಕಾಯಿಲೆಯಿಂದ ಬಳಲುತ್ತಿರುವವರು, ಏಕ ಪೋಷಕರು, ವಿಧವೆಯರಿಗೆ ಶೇಕಡ 1 ರಷ್ಟು, ದಂಪತಿ ಪ್ರಕರಣಗಳಲ್ಲಿ ಶೇಕಡ 3 ರಷ್ಟು, ಸಾಮಾನ್ಯ ವರ್ಗದವರಿಗೆ ಶೇಕಡ 6ರಷ್ಟು ಸೇರಿ ಶೇಕಡ 15 ರಷ್ಟು ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ.