ಬೆಳಗಾವಿ: ನನ್ನದು ಸೌಮ್ಯ ರೂಪದ ಪ್ರತಿಭಟನೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಅಧಿವೇಶನಕ್ಕೆ ಗೈರು ಹಾಜರಾದ ಬಗ್ಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನನಗೆ ಕ್ಲೀನ್ ಚಿಟ್ ಸಿಕ್ಕ ನಂತರವೂ ಸಂಪುಟಕ್ಕೆ ಸೇರಿಸಿಕೊಂಡಿಲ್ಲ. ಮೂರ್ನಾಲ್ಕು ತಿಂಗಳು ಬಾಕಿ ಇದೆ. ಆದರೂ ಸಂಪುಟ ವಿಸ್ತರಣೆ ಮಾಡುತ್ತಿಲ್ಲ ಎಂದರು.
ನಿಮ್ಮನ್ನು ಏಕೆ ಸಂಪುಟಕ್ಕೆ ಸೇರಿಸಿಕೊಳ್ಳುತ್ತಿಲ್ಲ ಎಂದು ಜನ ಕೇಳುತ್ತಿದ್ದಾರೆ. ಸಂಪುಟಕ್ಕೆ ಸೇರಿಸಿಕೊಳ್ಳದ ಬಗ್ಗೆ ಜನರಿಗೆ ಉತ್ತರ ನೀಡಲು ನನಗೆ ಆಗುತ್ತಿಲ್ಲ. ನನ್ನನ್ನು ಏಕೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿಲ್ಲ ಎಂದು ಉತ್ತರ ನೀಡಲಿ ಎಂದು ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ವಿಚಾರವೇ ಬೇರೆ, ನನ್ನ ವಿಚಾರವೇ ಬೇರೆ. ಸಚಿವ ಸ್ಥಾನ ನೀಡುವ ಬಗ್ಗೆ ಪಕ್ಷದ ಹೈಕಮಾಂಡ್ ಸಹ ಯೋಚಿಸಿದೆ. ಆದರೆ, ನಾನು ಮೋದಿ ಮತ್ತು ಅಮಿತ್ ಶಾ ಅವರೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ. ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿದಾಗ ಸಂಪುಟಕ್ಕೆ ತೆಗೆದುಕೊಳ್ಳುತ್ತೇವೆ ಎಂದಿದ್ದರು. ಏಕೆ ಸಂಪುಟಕ್ಕೆ ತೆಗೆದುಕೊಂಡಿಲ್ಲ ಎಂಬುದರ ಬಗ್ಗೆ ಉತ್ತರ ಕೊಡಬೇಕು. ಆದರೆ, ಉತ್ತರ ನೀಡುತ್ತಿಲ್ಲ. ಮುಖ್ಯಮಂತ್ರಿಗಳ ಮೇಲೆ ನಾನು ಆರೋಪ ಮಾಡುವುದಿಲ್ಲ. ಸಂಪುಟ ವಿಸ್ತರಣೆ ಬಗ್ಗೆ ಯಾರು ನಿರ್ಧರಿಸಬೇಕೋ ಅವರು ನಿರ್ಧರಿಸಲಿ. ಮುಖ್ಯಮಂತ್ರಿ ಹೆಚ್ಚು ಗಮನಹರಿಸುತ್ತಾರೆ ಎನ್ನುವುದು ನನ್ನ ಅಭಿಪ್ರಾಯ. ಸಚಿವ ಸ್ಥಾನ ವಿಚಾರದಲ್ಲಿ ನಮ್ಮ ಸಮುದಾಯವನ್ನು ತರುವುದು ಬೇಡ ಎಂದು ಹೇಳಿದರು.
ಕೆ.ಜೆ. ಜಾರ್ಜ್ ಗೃಹ ಸಚಿವರಾಗಿದ್ದಾಗ ಕೊಲೆ ಆರೋಪ ಬಂದಿತ್ತು. ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತನಿಖೆ ಆಗಿ ಕ್ಲೀನ್ ಚಿಟ್ ಸಿಕ್ಕ ಬಳಿಕ ಮತ್ತೆ ಜಾರ್ಜ್ ಸಚಿವರಾಗಿದ್ದರು. ನನ್ನ ವಿರುದ್ಧ ಆರೋಪ ಬಂದಾಗ ರಾಜೀನಾಮೆ ಬೇಡವೆಂದರು. ಎಫ್ಐಆರ್ ಆದಾಗ ನೈತಿಕತೆ ಪ್ರಶ್ನೆ ಬರುತ್ತದೆ ಎಂದು ನಾನೇ ರಾಜೀನಾಮೆ ನೀಡಿದ್ದೆ. ನನಗೆ ಕ್ಲೀನ್ ಚಿಟ್ ಆದ ಬಳಿಕವೂ ಸಚಿವ ಸ್ಥಾನ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.