ಇಡೀ ಕ್ರೀಡಾಲೋಕವನ್ನೇ ತೀವ್ರ ಕುತೂಹಲಕ್ಕೆ ತಳ್ಳಿದ ಫಿಫಾ ವಿಶ್ವಕಪ್ 2022 ಫೈನಲ್ ಪಂದ್ಯ ಗೂಗಲ್ ನಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಕಳೆದ 25 ವರ್ಷದಲ್ಲಿ ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಪೈಕಿ ಈ ಬಾರಿ ನಡೆದ ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ಫೈನಲ್ ಪಂದ್ಯವೇ ನೆಟ್ಟಿಗರಿಗೆ ಫೇವರಿಟ್ ಆಗಿದೆ.
ಅದು ಹೇಗೆಂದರೆ ಈ ಬಾರಿಯ ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ವೇಳೆಯೇ ಅತಿ ಹೆಚ್ಚು ಗೂಗಲ್ ಸರ್ಚ್ ಟ್ರಾಫಿಕ್ ಆಗಿದೆ. ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಗೂಗಲ್ ಸರ್ಚ್ ತನ್ನ ಅಸ್ತಿತ್ವದ 25 ವರ್ಷಗಳಲ್ಲಿ ಅತಿ ಹೆಚ್ಚು ಟ್ರಾಫಿಕ್ ಅನ್ನು ದಾಖಲಿಸಿದೆ.
ಇದು ಇಡೀ ಜಗತ್ತು ಒಂದೇ ವಿಷಯದ ಬಗ್ಗೆ ಹುಡುಕುತ್ತಿರುವಂತೆ ಇತ್ತು ಎಂದು ಆಲ್ಫಾಬೆಟ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ಟ್ವೀಟ್ ಮಾಡಿ ಹೇಳಿದ್ದಾರೆ. ಇದು ಅರ್ಜೆಂಟೀನಾದ ಮೆಸ್ಸಿ ಮ್ಯಾಜಿಕ್ ಎಂದೇ ಬಣ್ಣಿಸಲಾಗಿದೆ.
ಫಿಫಾ ವಿಶ್ವಕಪ್ ಗೆಲ್ಲುವ ಲಿಯೋನೆಲ್ ಮೆಸ್ಸಿ ಅವರ ಕನಸು ಭಾನುವಾರ ಕೊನೆಗೂ ಸಾಕಾರಗೊಂಡಿತು. ಅರ್ಜೆಂಟೀನಾ ಕೆಲವು ಆತಂಕದ ಕ್ಷಣಗಳ ಬಳಿಕ ಹಾಲಿ ಚಾಂಪಿಯನ್ ಫ್ರಾನ್ಸ್ ವಿರುದ್ಧ 4-2 ಪೆನಾಲ್ಟಿ ಶೂಟೌಟ್‌ನಲ್ಲಿ ಹೋರಾಟದ ಜಯ ದಾಖಲಿಸಿತು.