ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ನಂತರ ರಾಜ್ಯದ ಅಸೆಂಬ್ಲಿ ಸ್ಪೀಕರ್ ಗಿರೀಶ್ ಗೌತಮ್ ಕೂಡ ನಟ ಶಾರುಖ್ ಖಾನ್ ಅವರ ಮುಂಬರುವ ಚಿತ್ರ ಪಠಾನ್ ಅನ್ನು ವಿರೋಧಿಸಿದ್ದಾರೆ.
“ಶಾರುಖ್ ಅವರು ತಮ್ಮ ಮಗಳ ಜೊತೆ ಈ ಚಿತ್ರವನ್ನು ನೋಡಬೇಕು, ಚಿತ್ರವನ್ನು ಅಪ್ಲೋಡ್ ಮಾಡಬೇಕು ಮತ್ತು ಅದನ್ನು ತಮ್ಮ ಮಗಳ ಜೊತೆ ನೋಡುತ್ತಿರುವುದಾಗಿ ಈ ಜಗತ್ತಿಗೆ ತಿಳಿಸಬೇಕು. ಇದೇ ರೀತಿಯ ಚಿತ್ರವನ್ನು ನೀವು ಪ್ರವಾದಿಯ ಮೇಲೆ ಚಿತ್ರೀಕರಿಸಿ ಬಿಡುಗಡೆ ಮಾಡಬೇಕೆಂದು ನಾನು ನಿಮಗೆ ಸವಾಲು ಹಾಕುತ್ತೇನೆ” ಎಂದು ಅವರು ಶಾರುಖ್ ಖಾನ್ ಗೆ ಸವಾಲು ಹಾಕಿದ್ದಾರೆ.
ಥಿಯೇಟರ್‌ಗಳಲ್ಲಿ ಪಠಾಣ್ ಚಿತ್ರವನ್ನು ನಿಷೇಧಿಸುವ ಬೇಡಿಕೆಗಳ ನಡುವೆ ಇಂದು ಪ್ರಾರಂಭವಾಗುವ ಐದು ದಿನಗಳ ಚಳಿಗಾಲದ ಅಧಿವೇಶನಕ್ಕೆ ಮುಂಚಿತವಾಗಿ ಸ್ಪೀಕರ್ ಗಿರೀಶ್ ಗೌತಮ್ ಈ ಹೇಳಿಕೆ ನೀಡಿದ್ದಾರೆ. ಈ ವಿಚಾರವನ್ನು ಆಡಳಿತಾರೂಢ ಬಿಜೆಪಿಯು ವಿಧಾನಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ.
ವಿರೋಧ ಪಕ್ಷದ ನಾಯಕ ಡಾ.ಗೋವಿಂದ್ ಸಿಂಗ್ ಮತ್ತು ಮಾಜಿ ಕೇಂದ್ರ ಸಚಿವ ಸುರೇಶ್ ಪಚೌರಿ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಈ ಚಿತ್ರವನ್ನು ವಿರೋಧಿಸಿದ್ದಾರೆ. ಇದು ನಮ್ಮ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಇದು ಪಠಾಣ್ ಬಗ್ಗೆ ಅಲ್ಲ, ಆದರೆ ಪರಿಧಾನ್ (ಬಟ್ಟೆ)” ಎಂದು ಸುರೇಶ್ ಪಚೌರಿ ಹೇಳಿದರು. ಭಾರತೀಯ ಸಂಸ್ಕೃತಿಯಲ್ಲಿ, ಯಾವುದೇ ಮಹಿಳೆ ಅಂತಹ ಬಟ್ಟೆಗಳನ್ನು ಧರಿಸುವುದು ಮತ್ತು ಆ ದೃಶ್ಯವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದನ್ನು ಯಾರೂ ಅನುಮತಿಸುವುದಿಲ್ಲ ಎಂದಿದ್ದಾರೆ.
ಪಠಾಣ್ ಚಿತ್ರದ ‘ಬೇಷರಂ ರಂಗ್’ ಹಾಡನ್ನು ಬಿಡುಗಡೆ ಮಾಡಿದ ನಂತರ ಹಾಡಿನಲ್ಲಿ ದೀಪಿಕಾ ಹಾಕಿರುವ ಬಿಕಿನಿ ಬಟ್ಟೆಗಳ ಬಗ್ಗೆ ಸಾಕಷ್ಟು ವಿವಾದದ ಚರ್ಚೆಯೆದ್ದಿದೆ.