ಮಕ್ಕಳ ಆರಂಭಿಕ ಒಂದು ವರ್ಷವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಶಿಶುಗಳಿಗೆ ಹೆಚ್ಚು ಸೆಖೆ, ಶೀತ, ಮಳೆ ತಗುಲದಂತೆ ಕಾಪಾಡಬೇಕು. ಆರಂಭದಲ್ಲಿ ಪುಟಾಣಿಗಳಿಗೆ ಎಲ್ಲಾ ಋತುಗಳೂ ಹೊಸತು. ವಿಶೇಷವಾಗಿ ಚಳಿಗಾಲದಲ್ಲಿ ಶಿಶುಗಳು ಶೀತ, ಕೆಮ್ಮಿನಿಂದ ಬಳಲುವ ಅಪಾಯವಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ನವಜಾತ ಶಿಶುಗಳ ಆರೋಗ್ಯಕ್ಕಾಗಿ ಕೆಲವೊಂದು ಅಂಶಗಳ ಬಗ್ಗೆ ಕಾಳಜಿ ವಹಿಸಬೇಕು.
ಮಗುವಿನ ಆರೋಗ್ಯದ ಜೊತೆಗೆ ಚರ್ಮದ ಕಾಳಜಿಯೂ ಬಹಳ ಮುಖ್ಯ. ಯಾಕೆಂದರೆ ಶಿಶುವಿನ ಚರ್ಮ ಅತ್ಯಂತ ಸೂಕ್ಷ್ಮವಾಗಿರುತ್ತದೆ.
ಶುಚಿತ್ವ: ಚಳಿಗಾಲದಲ್ಲಿ ನವಜಾತ ಶಿಶುವನ್ನು ರೋಗಗಳಿಂದ ರಕ್ಷಿಸುವುದು ಬಹಳ ಮುಖ್ಯ. ಯಾರಾದರೂ ಮಗುವನ್ನು ಸ್ಪರ್ಶಿಸುವ ಅಥವಾ ಎತ್ತಿಕೊಳ್ಳುವ ಮೊದಲು ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಏಕೆಂದರೆ ಚಳಿಗಾಲದಲ್ಲಿ ವೈರಲ್ ಸೋಂಕುಗಳು ಬಹಳ ಬೇಗನೆ ಹರಡುತ್ತವೆ. ಶಿಶುಗಳಿಗೆ ಆ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಇರುವುದಿಲ್ಲ. ಹಾಗಾಗಿ ಮಗುವನ್ನು ಅತ್ಯಂತ ಸ್ವಚ್ಛವಾಗಿಡಬೇಕು. ಕಾಲಕಾಲಕ್ಕೆ ಮಗುವಿನ ಬಟ್ಟೆಗಳನ್ನು ಬದಲಾಯಿಸಿ.
ಸ್ತನಪಾನ: ಅನೇಕ ಬಾರಿ ಮಹಿಳೆಯರು ತಮ್ಮ ದೌರ್ಬಲ್ಯದಿಂದಾಗಿ ಮಗುವಿಗೆ ಎದೆಹಾಲು ಕುಡಿಸಲು ಮುಂದಾಗುವುದಿಲ್ಲ. ಇದು ಮಕ್ಕಳ ಆರೋಗ್ಯಕ್ಕೆ ಬಹಳಷ್ಟು ಹಾನಿಯನ್ನುಂಟುಮಾಡುತ್ತದೆ. ಚಳಿಗಾಲದಲ್ಲಿ ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ತಾಯಿಯ ಹಾಲು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಎದೆಹಾಲು ಚಳಿಗಾಲದಲ್ಲಿ ಬರುವ ಋತುಮಾನದ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸುತ್ತದೆ. ಇದಲ್ಲದೇ ತಾಯಿ ಮಗುವಿಗೆ ಹಾಲು ಉಣಿಸಿದಾಗ ಆ ಸಮಯದಲ್ಲಿ ತಾಯಿಯ ದೇಹದ ಶಾಖವೂ ಮಗುವಿಗೆ ಹೋಗುತ್ತದೆ. ಇದರಿಂದಾಗಿ ಮಗು ತುಂಬಾ ಶಾಂತ ಸ್ಥಿತಿಯಲ್ಲಿರುತ್ತದೆ ಮತ್ತು ಚಳಿಗಾಲದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ. ಅದಕ್ಕಾಗಿಯೇ ನೀವು ಚಳಿಗಾಲದಲ್ಲಿ ಮಗುವಿಗೆ ಎದೆಹಾಲು ಉಣಿಸಬೇಕು.
ಚರ್ಮದ ಆರೈಕೆ: ಚಳಿಗಾಲದಲ್ಲಿ ಪ್ರತಿಯೊಬ್ಬರ ತ್ವಚೆಯು ಒಣ ಮತ್ತು ಒರಟಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಗುವಿನ ಚರ್ಮವನ್ನು ಹೈಡ್ರೇಟ್ ಆಗಿಡದಿದ್ದರೆ ಮಗುವಿಗೆ ದೇಹದಲ್ಲಿ ಸುಡುವಿಕೆ, ತುರಿಕೆ ಮತ್ತು ಕೆಂಪು ದದ್ದುಗಳು ಉಂಟಾಗಬಹುದು. ಅದಕ್ಕಾಗಿಯೇ ಮಗುವಿಗೆ ಪ್ರತಿದಿನ ಮಾಯಿಶ್ಚರೈಸರ್ ಅನ್ನು ಹಚ್ಚಿರಿ. ಇದರಿಂದ ಮಗುವಿನ ಚರ್ಮ ಮೃದುವಾಗಿರುತ್ತದೆ.