ಬೆಂಗಳೂರು: ಮಾಜಿ ಸಚಿವ ಜನಾರ್ಧನ ರೆಡ್ಡಿ ನಡೆ ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಹೊಸ ಮನೆ ಖರೀದಿ, ಗೃಹಪ್ರವೇಶದ ಬಳಿಕ ಇದೀಗ ಡಿಸೆಂಬರ್ 25ರಂದು ಸುದ್ದಿಗೋಷ್ಠಿ ನಡೆಸಲು ಸಜ್ಜಾಗಿದ್ದು, ಮಹತ್ವದ ಘೋಷಣೆ ಮಾಡಲಿದ್ದಾರೆ.
ಬೆಂಗಳೂರಿನ ಪಾರಿಜಾತಾ ಅಪಾರ್ಟ್ ಮೆಂಟ್ ನಲ್ಲಿ ಜನಾರ್ಧನ ರೆಡ್ಡಿ ಸುದ್ದಿಗೋಷ್ಠಿ ನಡೆಸಲಿದ್ದು, ಹೊಸ ರಾಜಕೀಯ ಪಕ್ಷದ ಬಗ್ಗೆ ಘೋಷಣೆ ಮಾಡಲಿದ್ದಾರಾ ಅಥವಾ ಬಿಜೆಪಿಯಲ್ಲಿಯೇ ಮುಂದುವರೆಯುವ ಬಗ್ಗೆ ಖಚಿತಪಡಿಸಲಿದ್ದಾರಾ? ಎಂಬ ಬಗ್ಗೆ ಕುತೂಹಲ ಮೂಡಿಸಿದೆ.
ಮುಂಬರುವ ವಿಧಾನಸಭಾ ಚುನಾವಣೆಗೆ ತಾವು ಸ್ಪರ್ಧಿಸುವ ಕ್ಷೇತ್ರದ ಬಗ್ಗೆಯೂ ಸಹ ಘೋಷಣೆ ಮಾಡುವ ಸಾಧ್ಯತೆ ಇದ್ದು, ರೆಡ್ಡಿ ರಾಜಕೀಯ ನಡೆ ಸಂಚಲನಕ್ಕೆ ಕಾರಣವಾಗಲಿದೆ.
ಇನ್ನು ನಾಳೆಯಿಂದ ಜನಾರ್ಧನ ರೆಡ್ಡಿ ವಿವಿಧ ಮಠಗಳಿಗೆ ಭೇಟಿ ನೀಡಲಿದ್ದಾರೆ. ನಾಳೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಹಾಗೂ ಡಿ.20ರಂದು ಗದುಗಿನ ಪುಟ್ಟರಾಜ ಗವಾಯಿಗಳ ಗದ್ದುಗೆಗೆ ಭೇಟಿ ನೀಡಲಿದ್ದಾರೆ. ಡಿಸೆಂಬರ್ 21ರಂದು ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಭಾಗದ ಪ್ರಮುಖ ಮುಖಂಡರ ಸಭೆ ಕರೆದಿದ್ದು, ಮಹತ್ವ ಪಡೆದುಕೊಂಡಿದೆ. ಡಿಸೆಂಬರ್ 22ರಂದು ಗಂಗಾವತಿ ಗ್ರಾಮದೇವತೆ ದುರ್ಗಾದೇವಿ ಜಾತ್ರೆಯಲ್ಲಿ ಭಾಗಿಯಾಗಲಿದ್ದು, ಅಂದು ಕೂಡ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.