ಜಾರ್ಖಂಡ್ ನ ಸಾಹಿಬ್ಗಂಜ್ ಜಿಲ್ಲೆಯಲ್ಲಿ ಶ್ರದ್ಧಾ ವಾಕರ್ ಕೊಲೆ ಪ್ರಕರಣದಂತೆಯೇ ಮತ್ತೊಂದು ಕೊಲೆ ನಡೆದಿದೆ. 22 ವರ್ಷದ ಪತ್ನಿಯನ್ನು ಕೊಂದು ಆಕೆಯ ದೇಹವನ್ನು ಹಲವಾರು ಭಾಗಗಳಾಗಿ ಕತ್ತರಿಸಿದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ.
ಸಾಹಿಬ್ ಗಂಜ್ ಜಿಲ್ಲೆಯ ಬೋರಿಯೊ ಬ್ಲಾಕ್ ಅಡಿಯಲ್ಲಿ ಹೊಸದಾಗಿ ನಿರ್ಮಿಸಲಾದ ಅಂಗನವಾಡಿ ಕೇಂದ್ರದ ಹಿಂದೆ ಮಾನವ ಅವಶೇಷಗಳನ್ನು ನಾಯಿ ತಿನ್ನುತ್ತಿರುವುದನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ.
ಮಾಹಿತಿ ಪಡೆದ ನಂತರ, ಪೊಲೀಸರು ಸ್ಥಳಕ್ಕೆ ತಲುಪಿ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆಯ ದೇಹದ ಹಲವಾರು ತುಣುಕುಗಳನ್ನು ವಶಪಡಿಸಿಕೊಂಡರು.
ತನಿಖೆಯ ಸಮಯದಲ್ಲಿ, ಮಹಿಳೆಯ ಪತಿ ದಿಲ್ದಾರ್ ಅನ್ಸಾರಿ ಅವಳನ್ನು ಕೊಂದು, ಆಕೆಯ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿ ಅವುಗಳನ್ನು ವಿಲೇವಾರಿ ಮಾಡುವ ಮೊದಲು ತನ್ನ ಮನೆಯಲ್ಲಿ ಗೋಣಿಚೀಲದಲ್ಲಿ ಸಂಗ್ರಹಿಸಿದ್ದಾನೆ ಎಂಬುದು ಪೊಲೀಸರಿಗೆ ಗೊತ್ತಾಗಿದೆ.
ಆರೋಪಿಯ ಮನೆಯಿಂದ ಮಹಿಳೆಯ ದೇಹದ ಇತರ ಕತ್ತರಿಸಿದ ತುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಹಿಬ್ಗಂಜ್ನಲ್ಲಿ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಸೇರಿದ 22 ವರ್ಷದ ಮಹಿಳೆಯ ದೇಹದ 12 ಭಾಗಗಳು ಪತ್ತೆಯಾಗಿವೆ. ದೇಹದ ಕೆಲವು ಭಾಗಗಳು ಇನ್ನೂ ನಾಪತ್ತೆಯಾಗಿದ್ದು, ಹುಡುಕಾಟ ನಡೆಯುತ್ತಿದೆ. ಆಕೆಯ ಪತಿ ದಿಲ್ದಾರ್ ಅನ್ಸಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತರು ಅವನ ಎರಡನೇ ಪತ್ನಿ ಎಂದು ಸಾಹಿಬ್ಗಂಜ್ ಪೊಲೀಸ್ ಸೂಪರಿಂಟೆಂಡೆಂಟ್ ಹೇಳಿದ್ದಾರೆ.