ಮಂಡ್ಯ: ವಸತಿ ಶಾಲಾ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದ ಮಂಡ್ಯ ಜಿಲ್ಲೆಯ ಕಟ್ಟೇರಿ ಪ್ರೌಢಶಾಲೆಯ ಮುಖ್ಯಶಿಕ್ಷಕನನ್ನು ಅಮಾನತುಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಪಾಂಡವಪುರ ತಾಲೂಕಿನ ಕಟ್ಟೇರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಚಿನ್ಮಯಾನಂದ ಮೂರ್ತಿ ಅಮಾನತುಗೊಂಡಿರುವ ಶಿಕ್ಷಕ. ಎರಡು ದಿನಗಳ ಹಿಂದೆ ಕಟ್ಟೇರಿ ವಸತಿ ಶಾಲೆಯ ಹಾಸ್ಟೇಲ್ ಗೆ ಬಂದು ಚಿನ್ಮಯಾನಂದ ಮೂರ್ತಿ, ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ. ಕೆಲ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದ.
ಈ ವೇಳೆ ವಿದ್ಯಾರ್ಥಿನಿಯರು ಶಿಕ್ಷಕನನ್ನು ಹಿಡಿದು ಧರ್ಮದೇಟು ನೀಡಿದ್ದರು. ವಿದ್ಯಾರ್ಥಿನಿಯರಿಂದ ತಪ್ಪಿಸಿಕೊಳ್ಳಲು ಮುಂದಾದಾಗ ಹಾಸ್ಟೇಲ್ ಗೇಟ್ ಬಂದ್ ಮಾಡಿ ಪೊರಕೆ, ದೊಣ್ಣೆಗಳಿಂದ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು.
ಶಿಕ್ಷಕ ಚಿನ್ಮಯಾನಂದನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದರು. ಇದೀಗ ಶಿಕ್ಷಣ ಇಲಾಖೆ ಆಯುಕ್ತರು, ಚಿನ್ಮಯಾನಂದನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.