ಮಂಡ್ಯ: ಕರ್ನಾಟಕ ರಕ್ಷಣಾವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ವಾಗ್ವಾದಕ್ಕಿಳಿದ ಘಟನೆ ಬೆನ್ನಲ್ಲೇ, ಕರವೇ ರಾಜ್ಯಾದ್ಯಕ್ಷ ನಾರಾಯಣಗೌಡ ರಾಜಕೀಯ ನಾಯಕರ ವಿರುದ್ಧ ಕೆಂಡ ಕಾರಿದ್ದಾರೆ.
ನಾಡು,ನುಡಿಗಾಗಿ ರಾಜಕೀಯ ನಾಯಕರು ಏನೂ ಮಾಡಿಲ್ಲ. ಇನ್ಮುಂದೆ ಕನ್ನಡ, ಕರವೇ ಕಾರ್ಯಕ್ರಮಗಳಿಗೆ ರಾಜಕೀಯ ನಾಯಕರನ್ನು ಆಹ್ವಾನಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಕೆ.ಆರ್. ಪೇಟೆಯಲ್ಲಿ ಕರವೇ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಜೆಡಿಎಸ್ ಮುಖಂಡ ಸಂತೋಷ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸುತ್ತಾ, ಆಲಿಬಾಬಾ ಹಾಗೂ 40 ಕಳ್ಳರು ಕಥೆ ಹೇಳಿ ಸಚಿವ ನಾರಾಯಣಗೌಡಗೆ ಟಾಂಗ್ ನೀಡಿದರು. ಇದು ಸಚಿವ ನಾರಾಯಣಗೌಡ ಹಾಗೂ ಜೆಡಿಎಸ್ ಮುಖಂಡರು ವೇದಿಕೆಯಲ್ಲಿಯೇ ಜಗಳ ಮಾಡಿಕೊಂಡು ಕಾದಾಡಿದ ಘಟನೆಗೆ ಸಾಕ್ಷಿಯಾಗಿದೆ.
ಈ ಘಟನೆ ಬೆನ್ನಲ್ಲೇ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ, ಇನ್ಮೇಲೆ ಯಾವ ರಾಜಕಾರಣಿಗಳನ್ನೂ ಕನ್ನಡ ಕಾರ್ಯಕ್ರಮಕ್ಕೆ ಕರೆಯುವುದಿಲ್ಲ. ರಾಜಕಾರಣಿಗಳನ್ನು ಆಹ್ವಾನಿಸದಂತೆ ನಮ್ಮ ಕಾರ್ಯಕರ್ತರಿಗೂ ಸೂಚಿಸಿದ್ದೇನೆ. ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಕನ್ನಡ, ಕರ್ನಾಟಕ, ನಾಡು, ನುಡಿ ವಿಚಾರವಾಗಿ ಮಾತನಾಡುವುದನ್ನು ಬಿಟ್ಟು ರಾಜಕೀಯ ಭಾಷಣ ಆರಂಭ ಮಾಡಿ ಕಚ್ಚಾಡಿಕೊಂಡಿದ್ದಾರೆ. ನಾನು ಇಬ್ಬರಿಂದ ಮೈಕ್ ಕಸಿದುಕೊಂಡ ಮೇಲೆ ಸುಮ್ಮನಾಗಿದ್ದಾರೆ ಎಂದು ಹೇಳಿದ್ದಾರೆ.