ಬೆಂಗಳೂರು: ಬಿಜೆಪಿ ಸರ್ಕಾರವನ್ನು ಟೀಕಿಸುವ ಭರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಉಗ್ರ ಕಹಳೆ ಮೊಳಗಿಸಿದೆ. ಮಂಗಳೂರು ಬಾಂಬ್ ಸ್ಫೋಟ ಪ್ರಕರಣದ ಆರೋಪಿಯನ್ನು ಯಾವುದೇ ತನಿಖೆ ಮಾಡದೇ ಉಗ್ರ ಎಂದು ಹೇಗೆ ಘೋಷಿಸಿದಿರಿ ಎಂದು ಹೇಳುವ ಮೂಲಕ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಪರ ನಿಂತಿದ್ದಾರೆ.
ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಮುಂಬೈ ಟೆರರಿಸ್ಟ್ ಅಟ್ಯಾಕ್ ತರಹದ ಘಟನೆ ಆಗಿತ್ತಾ? ಅಥವಾ ಪುಲ್ವಾಮಾ, ಕಾಶ್ಮೀರ ತರಹದ ಘಟನೆ ಆಗಿತ್ತಾ?
ಅದನ್ನು ಬಿಜೆಪಿಯವರು ಯಾವ ರೀತಿ ಪ್ರೊಜೆಕ್ಟ್ ಮಾಡಿದರು? ವೋಟರ್ ಐಡಿ ಪ್ರಕರಣ ಹೊರ ಬರುತ್ತಿದ್ದಂತೆ ಕುಕ್ಕರ್ ಬಾಂಬ್ ಸ್ಫೋಟ ಆಗೋಯಿತಂತೆ. ಯಾಕೆ? ಎಲ್ಲಿಂದ ಬಂದ ಕುಕ್ಕರ್ ಬಾಂಬ್ ಸ್ಫೋಟ ಮಾಡುವವನು? ಎಂದು ಪ್ರಶ್ನಿಸಿದ್ದಾರೆ.
ಯಾವುದೇ ತನಿಖೆಯನ್ನೇ ನಡೆಸದೇ ಆತನನ್ನು ಉಗ್ರ ಎಂದು ಘೋಷಿಸಿದರು. ಬಿಜೆಪಿ ನಾಯಕರು ಕೇವಲ ಭಾವನೆಯಲ್ಲಿ ಬದುಕು, ಹೊಟ್ಟೆ ತುಂಬಿಸಲು ಹೊರಟಿದ್ದೀರಿ. ಎಲ್ಲವನ್ನೂ ಜನ ನೋಡುತ್ತಿದ್ದಾರೆ. ಜನರೇನು ದಡ್ಡರಾ? ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಡಿ.ಕೆ.ಶಿವಕುಮಾರ್ ಹೇಳಿಕೆ ಚುನಾವಣೆ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಇನ್ನಷ್ಟು ರಾಜಕೀಯದಲ್ಲಿ ಬಡಿದಾಟಕ್ಕೆ ವೇದಿಕೆಯಾದಂತಾಗಿದೆ.