ಹಲ್ಲುಗಳ ಆರೋಗ್ಯದ ಬಗ್ಗೆ ಗಮನಹರಿಸುವುದು ಬಹಳ ಮುಖ್ಯ. ಹಲ್ಲುಗಳಿಲ್ಲದೇ ಬದುಕನ್ನು ಊಹಿಸಿಕೊಳ್ಳೋದು ಕೂಡ ಅಸಾಧ್ಯವೆನಿಸುತ್ತದೆ. ಹಲ್ಲುಗಳ ಬಗ್ಗೆ ಕಾಳಜಿ ವಹಿಸದೇ ಇದ್ದರೆ ಅದು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಹಲ್ಲುಗಳನ್ನು ಸ್ವಚ್ಛತೆ ಬಗ್ಗೆ ಹೆಚ್ಚು ಗಮನಹರಿಸಬೇಕು.
ಹಲ್ಲುಗಳ ಮಧ್ಯೆ ಕೊಳೆ ಸಂಗ್ರಹವಾಗದಂತೆ ಬೆಳಗ್ಗೆ ಮಾತ್ರವಲ್ಲದೆ ರಾತ್ರಿ ಮಲಗುವಾಗಲೂ ಹಲ್ಲುಜ್ಜಬೇಕು. ಹಲ್ಲು ಮತ್ತು ಬಾಯಿಗೆ ಸಂಬಂಧಪಟ್ಟ ಕಾಯಿಲೆಗಳಿಂದ ದೂರವಿರಲು ಬಯಸಿದ್ರೆ ರಾತ್ರಿ ಕೂಡ ಬ್ರಷ್ ಮಾಡುವುದು ಕಡ್ಡಾಯ. ರಾತ್ರಿ ಹಲ್ಲುಜ್ಜದೇ ಇದ್ದರೆ ಆಗುವ ಅನಾನುಕೂಲಗಳೇನು ಅನ್ನೋದನ್ನು ತಿಳಿಯೋಣ.
ಸೋಂಕಿನ ಅಪಾಯ
ರಾತ್ರಿ ಹಲ್ಲುಜ್ಜದೆ ಮಲಗುವುದರಿಂದ ಬಾಯಿಗೆ ಸೋಂಕು ತಗಲುವ ಅಪಾಯವಿದೆ. ರಾತ್ರಿ ಆಹಾರವನ್ನು ಸೇವಿಸಿದ ನಂತರ ಎಲ್ಲಾ ಬ್ಯಾಕ್ಟೀರಿಯಾಗಳು ಬಾಯಿಯಲ್ಲಿ ಸಂಗ್ರಹವಾಗುತ್ತವೆ ಮತ್ತು ಸೋಂಕಿಗೆ ಕಾರಣವಾಗುತ್ತವೆ. ಹಾಗಾಗಿ ಕಡ್ಡಾಯವಾಗಿ ರಾತ್ರಿ ಮಲಗುವ ಮೊದಲು ಹಲ್ಲುಜ್ಜಿ ಬಾಯಿಯನ್ನು ಸ್ವಚ್ಛಗೊಳಿಸಬೇಕು.
ಬಾಯಿಯ ದುರ್ವಾಸನೆ
ರಾತ್ರಿ ಹಲ್ಲುಜ್ಜದೇ ಇರುವುದು ಬಾಯಿಯ ದುರ್ವಾಸನೆಗೆ ಪ್ರಮುಖ ಕಾರಣವಾಗಿದೆ. ಹಲ್ಲುಜ್ಜದ ಕಾರಣ ಕೆಲವು ಬ್ಯಾಕ್ಟೀರಿಯಾಗಳು ಲಾಲಾರಸದೊಂದಿಗೆ ಮಿಶ್ರಣಗೊಳ್ಳುತ್ತವೆ. ಇದು ಕೆಟ್ಟ ಉಸಿರಾಟವನ್ನು ಉಂಟುಮಾಡುತ್ತದೆ. ರಾತ್ರಿಯಲ್ಲಿ ಬ್ರಷ್ ಮಾಡುವ ಮೂಲಕ ನೀವು ಬಾಯಿಯ ದುರ್ವಾಸನೆಯನ್ನು ತಪ್ಪಿಸಬಹುದು.
ಹಲ್ಲುಗಳ ಸಡಿಲಗೊಳಿಸುವಿಕೆ
ಸರಿಯಾಗಿ ಬ್ರಷ್ ಮಾಡದೇ ಇದ್ದರೆ ಹಲ್ಲುಗಳು ದುರ್ಬಲವಾಗುತ್ತವೆ ಮತ್ತು ನಿಧಾನವಾಗಿ ತಮ್ಮ ಸ್ಥಳದಿಂದ ಚಲಿಸಲು ಪ್ರಾರಂಭಿಸುತ್ತವೆ. ಚಿಕ್ಕ ವಯಸ್ಸಿನಲ್ಲೇ ನಿಮಗೆ ಹಲ್ಲುಗಳು ಉದುರಿ ಹೋಗುವ ಅಪಾಯವೂ ಇರುತ್ತದೆ.
ಒಸಡಿನ ಸಮಸ್ಯೆ
ಕೊಳಕು ಆಹಾರವು ರಾತ್ರಿಯಿಡೀ ಬಾಯಿಯಲ್ಲಿ ಸಂಗ್ರಹವಾಗುತ್ತದೆ ಮತ್ತು ಒಸಡುಗಳನ್ನು ದುರ್ಬಲಗೊಳಿಸುತ್ತದೆ. ದುರ್ಬಲ ಮತ್ತು ಕೊಳಕು ಹಲ್ಲುಗಳು ವಸಡುಗಳಿಗೆ ಸೋಂಕು ಹರಡುತ್ತವೆ.
ಆದ್ದರಿಂದ ವಸಡುಗಳು ಆರೋಗ್ಯಕರವಾಗಿರಬೇಕೆಂದರೆ ರಾತ್ರಿ ಬ್ರಷ್ ಮಾಡುವುದು ಅವಶ್ಯಕ. ರಾತ್ರಿಯಲ್ಲಿ ಹಲ್ಲುಜ್ಜದೇ ಇದ್ದರೆ ನ್ಯುಮೋನಿಯಾ, ಬುದ್ಧಿಮಾಂದ್ಯತೆ ಮತ್ತು ಉಸಿರಾಟದ ಕಾಯಿಲೆಗಳು ಸಹ ಬರುವ ಸಾಧ್ಯತೆ ಇರುತ್ತದೆ.