
ರಾಯಚೂರು: 2 ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ಗಡುವು ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ರಂಭಾಪುರಿ ಮಠದ ಡಾ. ಶ್ರೀ ವೀರಸೋಮೇಶ್ವರ ಸ್ವಾಮೀಜಿ, ಸರ್ಕಾರ ಸಂವಿಧಾನದ ವಿಚಾರ ಇಟ್ಟುಕೊಂಡು ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಅವರು, ಯಾವುದೇ ಧರ್ಮದ ಒಳಪಂಗಡದ ಬಗ್ಗೆ ನಾವು ಹೆಚ್ಚು ಹೇಳುವುದಿಲ್ಲ. ಯಾರೋ ಏನೋ ಗುಂಪುಗೂಡಿ ಸಂಘರ್ಷ ಉಂಟು ಮಾಡಿ ಸರ್ಕಾರಕ್ಕೆ ಗಡುವು ನೀಡಿದರೆ ಎಷ್ಟರಮಟ್ಟಿಗೆ ಸಫಲವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಮೀಸಲಾತಿ ವಿಚಾರದಲ್ಲಿ ರಾಜಕಾರಣಿಗಳು ಸ್ಪಷ್ಟಪಡಿಸಬೇಕು. ಇಂತಹ ವಿಚಾರದಲ್ಲಿ ಧರ್ಮಪೀಠ ಪ್ರತಿಕ್ರಿಯಿಸುವುದು ಸಮಂಜಸವಲ್ಲ. ಆದರೆ, ವೀರಶೈವರು ಎಲ್ಲರೂ ಒಂದಾಗಿ ಚಂದಾಗಿ ಹೋಗಬೇಕು. ಎಲ್ಲಾ ಒಳಪಂಗಡಗಳು ಸಹ ಸರ್ಕಾರದ ಸೌಲಭ್ಯ ಬಯಸುವುದು ಸಹಜ. ಆದರೆ, ಸಂವಿಧಾನಕ್ಕೆ ಒಂದು ರೇಖೆ ಇದೆ. ಅದನ್ನು ದಾಟಬಾರದು. ಅದನ್ನು ಮೀರಿ ನಡೆಯಲು ರಾಜಕಾರಣಿಗಳಿಗೂ ಸಾಧ್ಯವಿಲ್ಲ. ಮೀಸಲಾತಿ ವಿಚಾರದ ಬಗ್ಗೆ ಭಾರತ ಸರ್ಕಾರ ಚಿಂತಿಸುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.