ಬಾಲಿವುಡ್ನಲ್ಲಿ ಹಾಸ್ಯನಟ ಎಂದು ಗುರುತಿಸಿಕೊಂಡಿರೋ, ರಾಜಪಾಲ್ ಯಾದವ್ ಸಂಕಷ್ಟದಲ್ಲಿ ಸಿಲುಕಿದಂತಿದೆ. ಪ್ರಯಾಗ್ರಾಜ್ನಲ್ಲಿ ಚಿತ್ರೀಕರಣದ ವೇಳೆ, ವಿದ್ಯಾರ್ಥಿಯೊಬ್ಬನ ಬೈಕ್ಗೆ ಇವರು ಸ್ಕೂಟರ್ನಿಂದ ಗುದ್ದಿದ್ದಾರೆ ಅನ್ನೊ ಆರೋಪ ಇವರ ಮೇಲಿದೆ. ಇದೇ ಕಾರಣವನ್ನ ಮುಂದಿಟ್ಟುಕೊಂಡು ವಿದ್ಯಾರ್ಥಿ ಬಾಲಾಜಿ, ಕರ್ನಲ್ ಗಂಜ್ ಪೊಲೀಸ್ ಸ್ಟೇಷನ್ನಲ್ಲಿ ದೂರು ಕೊಟ್ಟಿದ್ದಾನೆ.
ಸಿನೆಮಾ ಶೂಟಿಂಗ್ ಸಮಯದಲ್ಲಿ ನಡೆದ ಈ ಘಟನೆಯಲ್ಲಿ, ವಿದ್ಯಾರ್ಥಿ ಬಾಲಾಜಿ ಅಲ್ಲೇ ಇದ್ದ ವಿಶ್ವವಿದ್ಯಾಲಯ ಬ್ಯಾಂಕ್ ರೋಡ್ ಬಳಿ ಸ್ಪರ್ಧಾತ್ಮಕ ಪರೀಕ್ಷೆಗೆ ಪುಸ್ತಕವನ್ನ ಖರೀದಿ ಮಾಡುತ್ತಿದ್ದ. ಅದೇ ಸ್ಥಳದಲ್ಲಿ ಸಿನೆಮಾದ ದೃಶ್ಯವೊಂದನ್ನ ಚಿತ್ರೀಕರಣ ಮಾಡಲಾಗುತ್ತಿತ್ತು. ಅದು ರಾಜ್ ಪಾಲ್ ಯಾದವ್ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ದೃಶ್ಯ. ಆ ಸ್ಕೂಟರ್ ನಂಬರ್ 70-ಇ-7097. ಅದನ್ನ ಓಡಿಸೋದಕ್ಕೆ ರಾಜ್ಪಾಲ್ ಯಾದವ್ ಕಷ್ಟಪಡುತ್ತಿದ್ದರು. ಕೊನೆಗೆ ಆ ವಾಹನ ಬ್ಯಾಲೆನ್ಸ್ ತಪ್ಪಿ ಅಲ್ಲೇ ಇದ್ದ ವಿದ್ಯಾರ್ಥಿಯ ಬೈಕ್ಗೆ ಗುದ್ದಿದ್ದಾರೆ.
ಹೀಗೆ ತನ್ನ ಬೈಕ್ಗೆ ಗುದ್ದಿದ ತಕ್ಷಣ, ವಿದ್ಯಾರ್ಥಿ ಗಲಾಟೆ ಮಾಡಿದ್ದಾನೆ. ಆಗ ಸಿನೆಮಾ ಶೂಟಿಂಗಾಗಿ ಬಂದಿದ್ದ ತಂಡ ಈತನಿಗೆ ತರಾಟೆ ತೆಗೆದುಕೊಂಡಿದ್ದಾರೆ, ಅಷ್ಟೆ ಅಲ್ಲ ಹಲ್ಲೆ ಮಾಡುವ ಪ್ರಯತ್ನ ಕೂಡಾ ನಡೆಸಿದ್ದಾರೆ ಎಂದು ವಿದ್ಯಾರ್ಥಿ ಆರೋಪಿಸಿದ್ದಾನೆ.
ವಿದ್ಯಾರ್ಥಿ ಪೊಲೀಸರಿಗೆ ದೂರು ಕೊಟ್ಟ ನಂತರ, ಸಿನೆಮಾ ತಂಡದವರು ಕೂಡ ದೂರನ್ನ ದಾಖಲಿಸಿದ್ದಾರೆ. ಶೂಟಿಂಗ್ ನಡೆಯುತ್ತಿರುವ ಸಮಯದಲ್ಲಿ ವಿದ್ಯಾರ್ಥಿ ಬಾಲಾಜಿ, ಅನುಮತಿ ಇಲ್ಲದಿದ್ದರೂ ಮೊಬೈಲ್ನಲ್ಲಿ ರೆಕಾರ್ಡ್ ಮಾಡುತ್ತಿದ್ದ. ಅದನ್ನ ತಡೆಯಲು ಪ್ರಯತ್ನಿಸಿದಾಗ, ಆತ ಎಲ್ಲರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಇದರಿಂದ ಶೂಟಿಂಗ್ ಸಮಯದಲ್ಲಿ ಸಮಸ್ಯೆ ಉಂಟಾಗಿದೆ ಎಂದು ದೂರು ಕೊಟ್ಟಿದ್ದಾರೆ.
ಸದ್ಯಕ್ಕೆ ಕರ್ನಲ್ಗಂಜ್ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ. ವಿದ್ಯಾರ್ಥಿ ಬಾಲಾಜಿ ಹಾಗೂ ಚಿತ್ರತಂಡ ಇಬ್ಬರ ಸಮಸ್ಯೆಗಳನ್ನ ಆಲಿಸಿಕೊಂಡಿದ್ದಾರೆ. ಸ್ಥಳದಲ್ಲೇ ಉಪಸ್ಥಿತರಿದ್ದ ಜನರ ಹೇಳಿಕೆಗಳನ್ನ ಕೇಳಿದ ಪೊಲೀಸರು, ರಾಜ್ಪಾಲ್ ಯಾದವ್ ಸ್ಕೂಟರ್ ಓಡಿಸುವಾಗ ಕ್ಲಚ್ ಕೇಬಲ್ ಕಟ್ ಆಗಿರುವುದರಿಂದ, ಆ ಗಾಡಿ ಅಲ್ಲೇ ಇದ್ದ ಬೈಕ್ಗೆ ಗುದ್ದಿದಾಗ ಈ ಗಲಾಟೆ ಆಗಿದೆ ಎಂದು ಹೇಳುತ್ತಿದ್ದಾರೆ.