54 ಮಕ್ಕಳ ತಂದೆಯಾಗಿದ್ದ ಪಾಕಿಸ್ತಾನದ ಹಾಜಿ ಅಬ್ದುಲ್ ಮಜೀದ್ ಮೆಂಗಲ್ ನಿಧನರಾಗಿದ್ದಾರೆ.75 ವರ್ಷದ ಮೆಂಗಲ್ ಹೃದಯಾಘಾತದಿಂದ ಬಲೂಚಿಸ್ತಾನದ ನೋಶ್ಕಿಯಲ್ಲಿ ಕೊನೆಯುಸಿರೆಳೆದರು. ಮೆಂಗಲ್ ಆರು ಬಾರಿ ವಿವಾಹವಾಗಿದ್ದಾರೆ. ಪಾಕಿಸ್ತಾನಿ ಮಾಧ್ಯಮಗಳ ಪ್ರಕಾರ ಮೆಂಗಲ್ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರ ಆಸ್ಪತ್ರೆ ನೋಶ್ಕಿಗೆ ವರ್ಗಾಯಿಸಲಾಗಿತ್ತು. ಆದರೆ ಆಸ್ಪತ್ರೆಗೆ ತಲುಪುವ ಮುನ್ನವೇ ಮೃತಪಟ್ಟಿದ್ದರು.
ಹಾಜಿ ಅಬ್ದುಲ್ ಮಜೀದ್ ಮೆಂಗಲ್ ಅವರ 54 ಮಕ್ಕಳಲ್ಲಿ 12 ಮಕ್ಕಳು ಸಾವನ್ನಪ್ಪಿದ್ದರು. ಸದ್ಯಕ್ಕೆ 42 ಮಕ್ಕಳು ಜೀವಂತ ಇದ್ದಾರೆ. 2017 ರಲ್ಲಿ ರಾಷ್ಟ್ರೀಯ ಜನಗಣತಿ ಪ್ರಾರಂಭವಾದಾಗ ಅತಿದೊಡ್ಡ ಕುಟುಂಬ ಮತ್ತು ಅದರ ಮುಖ್ಯಸ್ಥ ಅಬ್ದುಲ್ ಮಜೀದ್ ಮೆಂಗಲ್ ಬೆಳಕಿಗೆ ಬಂದರು.
ಜನಗಣತಿ ವೇಳೆ ಮೆಂಗಲ್ ಅವರ ಕುಟುಂಬದ ಗಾತ್ರವು ಜನಗಣತಿ ಕಾರ್ಯಕರ್ತರ ಗಮನ ಸೆಳೆದು ಅವರು ದಿಗ್ಭ್ರಮೆಗೊಳ್ಳುವಂತೆ ಮಾಡಿತ್ತು. ಈ ವೇಳೆ ಅವರು 100 ಮಕ್ಕಳಿಗೆ ತಂದೆಯಾಗುವ ಆಸೆಯನ್ನು ವ್ಯಕ್ತಪಡಿಸಿದ್ದರು.
ಅಬ್ದುಲ್ ಮಜೀದ್ ಮೆಂಗಲ್ ಅವರು ವೃತ್ತಿಯಲ್ಲಿ ಟ್ರಕ್ ಚಾಲಕರಾಗಿದ್ದರು. ಅವರು ಕೇವಲ 18 ವರ್ಷ ವಯಸ್ಸಿನವರಾಗಿದ್ದಾಗ ಮೊದಲ ಮದುವೆಯಾಗಿದ್ದರು. ನಂತರ ಐದು ಮಹಿಳೆಯರನ್ನು ಮದುವೆಯಾದರು. ಇದಕ್ಕೂ ಮೊದಲು ಕ್ವೆಟ್ಟಾದಲ್ಲಿ, ಜಾನ್ ಮುಹಮ್ಮದ್ 36 ಮಕ್ಕಳ ತಂದೆಯಾಗಿದ್ದರು. ಮೆಂಗಲ್ ಅವರ ಕುಟುಂಬವು ಬೆಳಕಿಗೆ ಬರುವವರೆಗೂ ಜಾನ್ ಮುಹಮ್ಮದ್ ದೊಡ್ಡ ಕುಟುಂಬವನ್ನು ಹೊಂದಿದ್ದಾರೆಂದು ನಂಬಲಾಗಿತ್ತು.