ದಿವ್ಯಾಂಗನಿಗೆ ಸೇತುವೆ ದಾಟಲು ಟ್ರಾಫಿಕ್ ಪೊಲೀಸ್ ಪೇದೆಯೊಬ್ಬರು ಸಹಾಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾನ್ ಸ್ಟೇಬಲ್ ಬ್ರಿಜೇಶ್ ತೋಮರ್ ಸಿಟಿ ರೈಲ್ವೇ ನಿಲ್ದಾಣದಲ್ಲಿ ನಿಯೋಜಿಸಲಾಗಿದ್ದ ವೇಳೆ ವಿಕಲಚೇತನ ವ್ಯಕ್ತಿಯ ತ್ರಿಚಕ್ರ ವಾಹನವನ್ನು ಓಡಿಕೊಂಡು ತಳ್ಳುತ್ತಾ ಸಹಾಯ ಮಾಡಿದ್ದಾರೆ.
ಘಟನೆ ನಡೆದಾಗ ಆ ಹಾದಿಯಲ್ಲಿ ಹೋಗುತ್ತಿದ್ದ ಕಾರು ಚಾಲಕರೊಬ್ಬರು ವಿಡಿಯೋ ಸೆರೆ ಹಿಡಿದಿದ್ದಾರೆ. ತನಗೆ ಸೇತುವೆಯನ್ನು ದಾಟಲು ದಯಮಾಡಿ ಸಹಾಯ ಮಾಡುವಂತೆ ದಿವ್ಯಾಂಗ ಸ್ಥಳೀಯರನ್ನು ವಿನಂತಿಸಿದ್ದರು. ಆದರೆ ಯಾರೂ ಮುಂದೆ ಬಂದಿಲ್ಲ. ಟ್ರಾಫಿಕ್ ಪೋಲೀಸ್ ಸಹಾಯ ಮಾಡಲು ಮುಂದೆ ಬಂದು ಸೇತುವೆ ಮಾರ್ಗವನ್ನು ದಾಟಲು ನೆರವಾದರು.
ಘಟನೆಯ ನಂತರ ಶುಕ್ರವಾರ ಡಿಎಸ್ಪಿ ನರೇಶ್ ಬಾಬು ಅನೌಟಿಯಾ ಮತ್ತು ಇತರ ಅಧಿಕಾರಿಗಳು ಬ್ರಿಜೇಶ್ ತೋಮರ್ ಅವರನ್ನು ಹೂವಿನ ಹಾರ ಹಾಕಿ ಅಭಿನಂದಿಸಿದರು. ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಟ್ರಾಫಿಕ್ ಪೊಲೀಸ್ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ.