ಪಾರ್ಲಿಮೆಂಟ್ ಮೇಲೆ ದಾಳಿ ನಡೆದು ಇಂದಿಗೆ 21 ವರ್ಷಗಳಾಗಿವೆ. ಡಿಸೆಂಬರ್ 13, 2001 ರಂದು ಪಾಕಿಸ್ತಾನ ಪ್ರೇರಿತ ಭಯೋತ್ಪಾದಕ ಗುಂಪುಗಳಾದ ಲಷ್ಕರ್ ಈ ತಯ್ಯಬ್ ಹಾಗೂ ಜೈಶ್ ಇ ಮೊಹಮ್ಮದ್ ಸಂಘಟನೆಯ ಐವರು ಭಯೋತ್ಪಾದಕರು ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಿದ್ದು, ಇದರಲ್ಲಿ 9 ಮಂದಿ ಬಲಿಯಾಗಿದ್ದರು.
ಅಂಬಾಸಿಡರ್ ಕಾರಿನಲ್ಲಿ ನಕಲಿ ಸ್ಟಿಕರ್ ಹಾಕಿಕೊಂಡು ಪಾರ್ಲಿಮೆಂಟ್ ಪ್ರವೇಶಿಸಿದ್ದ ಭಯೋತ್ಪಾದಕರನ್ನು ಗೇಟ್ ನಂಬರ್ 1ರ ಬಳಿ ಕಾರ್ಯ ನಿರ್ವಹಿಸುತ್ತಿದ್ದ ಕಮಲೇಶ್ ಕುಮಾರಿ ಯಾದವ್ ಮೊದಲು ಗುರುತಿಸಿದ್ದರು. ಅವರನ್ನು ತಡೆಗಟ್ಟಲು ಬ್ಯಾರಿಕೇಡ್ ಹಾಕಿದಾಗ ಅವರ ಮೇಲೆ ಹನ್ನೊಂದು ಬಾರಿ ಎಕೆ47 ಬಂದೂಕಿನಿಂದ ಗುಂಡು ಹಾರಿಸಲಾಗಿದ್ದು, ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ನಂತರ ಪಾರ್ಲಿಮೆಂಟ್ ಭವನ ಪ್ರವೇಶಿಸಲು ಈ ಭಯೋತ್ಪಾದಕರು ಯತ್ನಿಸಿದ್ದು, ಆದರೆ ಭದ್ರತಾ ಸಿಬ್ಬಂದಿಯ ಸಮಯೋಚಿತ ಕಾರ್ಯದ ಕಾರಣಕ್ಕೆ ಇದು ವಿಫಲವಾಗಿತ್ತು. ಆ ಬಳಿಕ ಮನ ಬಂದಂತೆ ಅವರುಗಳು ಗುಂಡು ಹಾರಿಸಿದ್ದು, ಇದರ ಪರಿಣಾಮ ದೆಹಲಿ ಪೊಲೀಸ್ ಇಲಾಖೆಯ 6 ಮಂದಿ, ಇಬ್ಬರು ಪಾರ್ಲಿಮೆಂಟ್ ಭವನದ ಸಿಬ್ಬಂದಿ ಹಾಗೂ ಕಮಲೇಶ್ ಕುಮಾರಿ ಯಾದವ್ ಸೇರಿದಂತೆ ಒಟ್ಟು ಒಂಬತ್ತು ಮಂದಿ ಹುತಾತ್ಮರಾಗಿದ್ದರು.
ಆದರೆ ಕೇವಲ ಅರ್ಧ ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ಭದ್ರತಾ ಸಿಬ್ಬಂದಿ ಭಯೋತ್ಪಾದಕರನ್ನು ಹೊಡೆದುರುಳಿಸಿದ್ದು, ನಂತರದ ತನಿಖೆಯಲ್ಲಿ ಸಂಚು ರೂಪಿಸಿದ ಆರೋಪದ ಮೇಲೆ ಮೊಹಮ್ಮದ್ ಅಫ್ಜಲ್ ಗುರು, ಶೌಕತ್ ಹುಸೇನ್, ಅಫ್ಜಲ್ ಗುರು ಹಾಗೂ ಸರ್ ಗಿಲಾನಿ ಎಂಬವರನ್ನು ಬಂಧಿಸಲಾಗಿತ್ತು.
ಬಂಧಿತ ಇಬ್ಬರು ಸಾಕ್ಯಾಧಾರಗಳ ಕೊರತೆಯಿಂದ ಬಿಡುಗಡೆಯಾಗಿದ್ದು, ಅಫ್ಜಲ್ ಗುರುವನ್ನು 2013ರ ಫೆಬ್ರವರಿಯಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. ಮತ್ತೊಬ್ಬ ಅಪರಾಧಿ ಶೌಕತ್ ಹುಸೇನ್ ಜೈಲಿನಲ್ಲಿದ್ದಾನೆ.