ನವದೆಹಲಿ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ 10 ಮತ್ತು 12ನೇ ತರಗತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಮಾದರಿಯನ್ನು ಮಾರ್ಪಡಿಸಲು ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಿದ್ಧತೆ ಮಾಡಿಕೊಂಡಿದೆ. ಸ್ಪರ್ಧಾತ್ಮಕ ಮಾದರಿಯ ವಸ್ತುನಿಷ್ಠ ಪ್ರಶ್ನೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಲಾಗಿದೆ.
ಲೋಕಸಭೆಯಲ್ಲಿ ಶಿಕ್ಷಣ ಖಾತೆ ಸಹಾಯಕ ಸಚಿವೆ ಅನ್ನಪೂರ್ಣದೇವಿ ಲಿಖಿತ ಉತ್ತರ ನೀಡಿಮ, 10ನೇ ತರಗತಿ ಪರೀಕ್ಷೆಗೆ ಈ ಬಾರಿ ಸಿದ್ಧಪಡಿಸಲಾದ ಪ್ರಶ್ನೆ ಪತ್ರಿಕೆಯಲ್ಲಿ ಶೇಕಡ 40ರಷ್ಟು, 12ನೇ ತರಗತಿ ಪರೀಕ್ಷೆಗೆ ಸಿದ್ಧಪಡಿಸಿರುವ ಪ್ರಶ್ನೆ ಪತ್ರಿಕೆಯಲ್ಲಿ ಶೇಕಡ 30ರಷ್ಟು ಪ್ರಶ್ನೆಗಳು ಸ್ಪರ್ಧಾತ್ಮಕ ಮಾದರಿಯಲ್ಲಿರುತ್ತವೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಲು ನೆರವಾಗುವಂತೆ ಆಬ್ಜೆಕ್ಟಿವ್ ಟೈಪ್, ಕನ್ಸ್ಟ್ರಕ್ಟಿಂಗ್ ರೆಸ್ಪಾನ್ಸ್ ಟೈಪ್ ಮತ್ತು ರೀಸನಿಂಗ್ ರೀತಿಯಲ್ಲಿ ಬಹು ಸ್ವರೂಪದ ಪ್ರಶ್ನೆಗಳಿಗೆ ಆದ್ಯತೆ ಇರಲಿದೆ ಎಂದು ತಿಳಿಸಿದ್ದಾರೆ.
ಜನವರಿ 15 ರಿಂದ ಪ್ರಾಯೋಗಿಕ ಪರೀಕ್ಷೆಗಳು ಆರಂಭವಾಗುವ ಸಾಧ್ಯತೆ ಇದೆ. ಫೆಬ್ರವರಿ 15 ರಿಂದ 10 ಮತ್ತು 12ನೇ ತರಗತಿಯ ಪರೀಕ್ಷೆಗಳು ಆರಂಭವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.