ಬೆಳಗಾವಿ; ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಗರಂ ಆಗಿರುವ ಸ್ವಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಈಗ ಸಚಿವ ಸಂಪುಟ ವಿಸ್ತರಣೆ ಯಾರಿಗೆ ಬೇಕಾಗಿದೆ? ಎಂದು ಪ್ರಶ್ನಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಶಾಸಕ ಯತ್ನಾಳ್, ಸಂಪುಟ ವಿಸ್ತರಣೆ ಈಗ ಯಾರಿಗೂ ಬೇಕಾಗಿಲ್ಲ, ಎಲ್ಲಾ ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಇಟ್ಟುಕೊಳ್ಳಲಿ. ಚುನಾವಣೆಗೆ ಮೂರ್ನಾಲ್ಕು ತಿಂಗಳಿರುವಾಗ ಮಂತ್ರಿಯಾಗಿ ಏನು ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತೆ? ಈಗ ಯಾರಿಗೂ ಸಚಿವನಾಗಲು ಆಸಕ್ತಿಯಿಲ್ಲ ಎಂದರು.
ಹೊಸ ಸರ್ಕಾರದಲ್ಲಿ ಮಂತ್ರಿಯಾಗಬೇಕು ಎಂದು ಎಲ್ಲರೂ ಸುಮ್ಮನಿದ್ದಾರೆ. ಈಗ ಸಂಪುಟ ವಿಸ್ತರಣೆ ಮಾಡಿ ಏನೂ ಪ್ರಯೋಜನವಿಲ್ಲ ಎಂದು ಹೇಳಿದರು.
ಇದೇ ವೇಳೆ ಗುಜರಾತ್ ಮಾದರಿ ವಿಚಾರವಾಗಿ ಗುಜರಾತ್ ರೀತಿ ಇಲ್ಲಿಯೂ ಹೊಸಬರಿಗೆ ಟಿಕೆಟ್ ಹಂಚಿಕೆ ಮಾಡಬೇಕು. ಯಾರ ವಿರುದ್ಧ ಆರೋಪಗಳಿವೆ ಅಂತವರಿಗೆ ಈ ಬಾರಿ ಟಿಕೆಟ್ ಕೊಡಲ್ಲ. ಕರ್ನಾಟಕದಲ್ಲಿ ಈ ಸಲ ಹಲವು ಬದಲಾವಣೆಗಳು ಆಗಲಿವೆ. ಒಂದೇ ಕುಟುಂಬದ ಎರಡು ಮೂರು ಜನರಿಗೆ ಟಿಕೆಟ್ ಸಿಗುವುದಿಲ್ಲ. ಒಂದೇ ಕುಟುಂಬದಲ್ಲಿ ಜಾಕೇಟ್ ಹೊಲಿಸಿಕೊಂಡು ಕೂತಿದ್ದಾರೆ. ಅಪ್ಪ-ಮಗ, ಅಣ್ಣ-ತಮ್ಮ…ಅಂತವರಿಗೆ ಟಿಕೆಟ್ ಇಲ್ಲ ಒಂದು ಕುಟುಂಬಕ್ಕೆ ಒಂದೇ ಟಿಕೆಟ್. ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಬೀಳಲಿದೆ ಎಂದು ಹೇಳಿದರು.