ನವದೆಹಲಿ: ಸರಿಸುಮಾರು 95 ಕೋಟಿ ನೋಂದಾಯಿತ ಮತದಾರರಲ್ಲಿ ಸುಮಾರು 56 ಕೋಟಿ ಜನರು ತಮ್ಮ ಆಧಾರ್ ವಿವರಗಳನ್ನು ಮತದಾರರ ಪಟ್ಟಿಯೊಂದಿಗೆ ಜೋಡಿಸಿದ್ದಾರೆ, ಇದು ಮತದಾರರ ಪಟ್ಟಿಯಿಂದ ನಕಲಿ ನಮೂದುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ.
55 ರಿಂದ 56 ಕೋಟಿ ಮತದಾರರು ಮತದಾರರ ಪಟ್ಟಿಯೊಂದಿಗೆ ಜೋಡಣೆಗಾಗಿ ತಮ್ಮ ಆಧಾರ್ ವಿವರಗಳನ್ನು ಚುನಾವಣಾ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಆಧಾರ್ ಮತ್ತು ಮತದಾರರ ಪಟ್ಟಿ ವಿವರಗಳನ್ನು ಸ್ವಯಂಪ್ರೇರಿತವಾಗಿ ಜೋಡಿಸಲು ಕಳೆದ ವರ್ಷ ಡಿಸೆಂಬರ್ನಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು.
ಇದರ ಅನ್ವಯ ಈ ವರ್ಷದ ಕೊನೆಯಲ್ಲಿ, ಕೇಂದ್ರ ಕಾನೂನು ಸಚಿವಾಲಯವು ಚುನಾವಣಾ ಕಾನೂನಿನಲ್ಲಿ ಕೈಗೊಂಡ ಬದಲಾವಣೆಗಳನ್ನು ಜಾರಿಗೆ ತರಲು ನಿಯಮಗಳನ್ನು ಹೊರಡಿಸಿತು. ಕಾನೂನು ಸಚಿವಾಲಯದ ಅಧಿಸೂಚನೆಯ ಪ್ರಕಾರ, ಹೊಸದಾಗಿ ಪರಿಚಯಿಸಲಾದ ಫಾರ್ಮ್ -6 ಬಿ ಬಳಸಿ, ಅಸ್ತಿತ್ವದಲ್ಲಿರುವ ಮತದಾರರು ತಮ್ಮ ಆಧಾರ್ ಸಂಖ್ಯೆಯನ್ನು ಮತಗಟ್ಟೆ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬಹುದು.
ಅಂದಹಾಗೆ ಆಧಾರ್ ಸಂಖ್ಯೆಗಳನ್ನು ಸಂಗ್ರಹಿಸುವುದಕ್ಕಾಗಿ ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ಹೊಸ ಫಾರ್ಮ್ ಅನ್ನು ಪರಿಚಯಿಸಲಾಗಿದೆ.