ಬೆಂಗಳೂರು: ಬಿಜೆಪಿಗೆ ರೌಡಿ ಶೀಟರ್ ಗಳ ಸೇರ್ಪಡೆಯನ್ನು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರೋಧಿಸಿದ್ದು, ಇದೀಗ ಕೊಲೆ ಕೇಸ್ ನಲ್ಲಿ ಆರೋಪಿಯಾಗಿದ್ದ ವ್ಯಕ್ತಿ ದಳಪತಿಗಳ ಸಮ್ಮುಖದಲ್ಲಿಯೇ ಜೆಡಿಎಸ್ ಸೇರಲು ವೇದಿಕೆ ಸಜ್ಜಾಗಿದೆ.
ಆರ್ ಟಿ ಐ ಕಾರ್ಯಕರ್ತ ಲಿಂಗರಾಜು ಹತ್ಯೆ ಕೇಸ್ ನಲ್ಲಿ ಆರೋಪಿಯಾಗಿ ಜೈಲು ಸೇರಿದ್ದ ಗೋವಿಂದರಾಜು ಇಂದು ಜೆಡಿಎಸ್ ಗೆ ಸೇರ್ಪಡೆಯಾಗಲಿದ್ದಾರೆ. ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.
ಚಾಮರಾಜಪೇಟೆಯಿಂದ ಶಾಸಕ ಜಮೀರ್ ಅಹ್ಮದ್ ವಿರುದ್ಧ ಗೋವಿಂದರಾಜು ಕಣಕ್ಕಿಳಿಯುವ ಸಾಧ್ಯತೆ ಇದೆ. ಆಜಾದ್ ನಗರ ವಾರ್ಡ್ ನ ಕಾರ್ಪೊರೇಟರ್ ಆಗಿದ್ದ ಗೌರಮ್ಮ ವಿರುದ್ಧ ಕಳಪೆ ಕಾಮಗಾರಿ ಮಾಹಿತಿ ಕಲೆ ಹಾಕಿದ್ದ ಆರ್ ಟಿ ಐ ಕಾರ್ಯಕರ್ತ ಲಿಂಗರಾಜು ಅವರನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಲಾಗಿತ್ತು.
ಹತ್ಯೆ ಕೇಸ್ ನಲ್ಲಿ ಗೌರಮ್ಮ ಹಾಗೂ ಗೋವಿಂದರಾಜು ಜೈಲು ಸೇರಿದ್ದರು. ಒಂದು ತಿಂಗಳ ಹಿಂದಷ್ಟೇ ಸಾಕ್ಷಾಧಾರಗಳ ಕೊರತೆ ಕಾರಣಕ್ಕೆ ಖುಲಾಸೆಗೊಂಡಿದ್ದ ಆರೋಪಿಗಳು ಇಂದು ಬೃಹತ್ ಕಾರ್ಯಕ್ರಮದ ಮೂಲಕ ಜೆಡಿಎಸ್ ಗೆ ಸೇರ್ಪಡೆಯಾಗುತ್ತಿದ್ದಾರೆ.