ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕೆಲ ಮಹತ್ವದ ವಿದ್ಯಮಾನಗಳು ನಡೆಯುತ್ತಿದ್ದು, ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಹೈಕಮಾಂಡ್ ನಿಂದ ಮಹತ್ವದ ಸಂದೇಶ ರವಾನೆಯಾಗಿದೆ ಎಂದು ಹೇಳಲಾಗುತ್ತಿದೆ.
ಕಳೆದ ಒಂದು ವಾರದಲ್ಲಿ ಆರ್.ಎಸ್.ಎಸ್ ಮುಖಂಡರು ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಸತತವಾಗಿ ಭೇಟಿಯಾಗಿ, ಸಭೆಗಳ ಮೇಲೆ ಸಭೆ ನಡೆಸುತ್ತಿದ್ದು, ಬಿಜೆಪಿಯಲ್ಲಿ ಬದಲಾವಣೆಯ ಬಿರುಗಾಳಿ ಬೀಸುವ ಸಾಧ್ಯತೆ ದಟ್ಟವಾಗಿದೆ.
ಡಿಸೆಂಬರ್ 7ರಂದು ಆರ್.ಎಸ್.ಎಸ್ ಮುಖಂಡ ದತ್ತಾತ್ರೆಯ ಹೊಸಬಾಳೆ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದರು. ಈದರ ಬೆನ್ನಲ್ಲೇ ನಿನ್ನೆ ಒಂದೇ ದಿನ 2 ಬಾರಿ ಆರ್.ಎಸ್.ಎಸ್ ಸಹ ಸಂಚಾಲಕ ಮುಕುಂದ್ ಅವರು ಸಿಎಂ ಬೊಮ್ಮಾಯಿ ಭೇಟಿಯಾಗಿ ರಹಸ್ಯ ಸಭೆ ನಡೆಸಿದ್ದಾರೆ.
ರಾಜ್ಯ ಸಚಿವ ಸಂಪುಟ ವಿಸ್ತರಣೆ, ವಿಧಾನಸಭಾ ಚುನಾವಣೆ ವಿಚಾರ ಹಾಗೂ ಪ್ರಮುಖವಾಗಿ ಆರ್.ಎಸ್.ಎಸ್ ನ ಕೆಲ ಪ್ರಮುಖರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡುವ ನಿಟ್ಟಿನಲ್ಲಿ ಚರ್ಚೆಗಳು ನಡೆದಿವೆ ಎನ್ನಲಾಗಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿಯೇ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವ ನಿರ್ಣಯ ಕೈಗೊಳ್ಳುವ ನಿಟ್ಟಿನಲ್ಲಿಯೂ ಸಮಾಲೋಚನೆ ನಡೆದಿದೆ ಎನ್ನಲಾಗಿದೆ.
ನಿನ್ನೆ ಬೆಳಿಗ್ಗೆಯಷ್ಟೇ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದ ಆರ್.ಎಸ್.ಎಸ್ ನಾಯಕ ಮುಕುಂದ್ ಬಳಿಕ ರಾತ್ರಿ ಕೂಡ ಭೇಟಿಯಾಗಿ ಮಹತ್ವದ ಸಭೆ ನಡೆಸಿದ್ದಾರೆ. ಆರ್.ಎಸ್.ಎಸ್ ನಾಯಕರೊಂದಿಗೆ ಸಿಎಂ ಸರಣಿ ಸಭೆ ರಾಜ್ಯ ಬಿಜೆಪಿ ಪಾಳಯದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ.