ಬೆಂಗಳೂರು: ಟಿಪ್ಪು ಸುಲ್ತಾನ್ ಕಾಲದ ದೀವಟಿಗೆ ಸಲಾಂ ಪೂಜೆಗೆ ರಾಜ್ಯ ಧಾರ್ಮಿಕ ಪರಿಷತ್ ಬ್ರೇಕ್ ಹಾಕಿದೆ. ಸಲಾಂ ಆರತಿ ಪೂಜೆ ನಿಲ್ಲಿಸುವಂತೆ ಧಾರ್ಮಿಕ ಪರಿಷತ್ ಸುತ್ತೋಲೆ ಹೊರಡಿಸಿದೆ.
ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ಟಿಪ್ಪು ರಾಜ್ಯಾಡಳಿತ ಕಾಲದಿಂದ ನಡೆಯುತ್ತಿದ್ದ ದೀವಟಿಗೆ ಸಲಾಂ ಪೂಜೆ ಇದಾಗಿದ್ದು, ಇನ್ಮುಂದೆ ಸಲಾಂ ಪೂಜೆ ನಡೆಸುವಂತಿಲ್ಲ ಎಂದು ಸೂಚಿಸಿದೆ. ದೀವಟಿಗೆ ಸಲಾಂ ಪೂಜೆ ಬದಲಾಗಿ ಸಂಧ್ಯಾಕಾಲದಲ್ಲಿ ದೇವಸ್ಥಾನಗಳಲ್ಲಿ ದೀಪ ನಮಸ್ಕಾರ ಪೂಜೆ ನೆರವೇರಿಸುವಂತೆ ತಿಳಿಸಿದೆ.
ಮಂಡ್ಯ ಜಿಲ್ಲೆಯ ಮೇಲುಕೋಟೆಯ ಚಲುವ ನಾರಾಯಣಸ್ವಾಮಿ ದೇವಾಲಯ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ಪುತ್ತೂರಿನ ಮಹಾಲಿಂಗೇಶ್ವರ ಸೇರಿದಂತೆ ಹಲವು ದೇವಾಲಯಗಳಲ್ಲಿ ಸಂದ್ಯಾಕಾಲದಲ್ಲಿ ದೀವಟಿಗೆ ಸಲಾಂ ಪೂಜೆ ಪದ್ಧತಿ ನಡೆದುಕೊಂಡು ಬರುತ್ತಿತ್ತು. ಟಿಪ್ಪು ಕಾಲದಿಂದ ಬಂದಿರುವ ಈ ಹೆಸರಿನ ಪೂಜೆ ಬದಲಾಗಿ ಇನ್ಮುಂದೆ ರಾಜ, ಮಂತ್ರಿ, ಪ್ರಜೆಗಳ ಒಳಿತಿಗಾಗಿ ನಡೆಸುವ ದೀಪ ನಮಸ್ಕಾರ ಹೆಸರಲ್ಲು ಪೂಜೆ ಮಾಡುವಂತೆ ಧಾರ್ಮಿಕ ಪರಿಷತ್ ಆದೇಶ ಹೊರಡಿಸಿದೆ.
ಇದೇ ವೇಳೆ ಧರಮಿಕ ಪರಿಷತ್ ಮುಜರಾಯಿ ಇಲಾಖೆ ಹೆಸರನ್ನೂ ಬದಲಿಸಿದ್ದು, ಧರ್ಮಾದಾಯ ದತ್ತಿ ಇಲಾಖೆ ಎಂದು ಮರುನಾಮಕರಣ ಮಾಡಿದೆ. ಈ ಬಗ್ಗೆ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಮಾಹಿತಿ ನೀಡಿದ್ದಾರೆ.