ಬೆಂಗಳೂರು: ಮಹಿಳಾ ಪಿಜಿಯಲ್ಲಿ ಹುಡುಗಿಯರ ಸ್ನಾನದ ದೃಶ್ಯ ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡ್ತಾ ಇದ್ದ ಆರೋಪಿಯನ್ನ ಬಹಳ ಬುದ್ದಿವಂತಿಕೆಯಿಂದ ಪೊಲೀಸರು ಬಂಧಿಸಿದ್ದಾರೆ.
ಪಾಂಡಿಚೇರಿ ಮೂಲದ ನಿರಂಜನ್ ಎಂಬಾತ ಬಂಧಿತ ಆರೋಪಿ. ಈತ ಹುಡುಗಿಯರು ಸ್ನಾನ ಮಾಡೋ ವಿಡಿಯೋ ಮಾಡಿಕೊಂಡು ಲೈಂಗಿಕ ಶೋಷಣೆಗೆ ಒತ್ತಾಯ ಮಾಡ್ತಾ ಇದ್ದ ಎಂಬುದು ತಿಳಿದು ಬಂದಿದೆ.
ಹೌದು, ಬೆಂಗಳೂರಿನ ಮಹಿಳಾ ಪಿಜಿಯೊಂದರಲ್ಲಿ ಇಂಥಹದೊಂದು ಘಟನೆ ನಡೆದಿದೆ. ಪಿಜಿ ಮಾಲೀಕನೊಂದಿಗೆ ಈತ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದೇ ಇಷ್ಟಕ್ಕೆ ಕಾರಣ ಎನ್ನಲಾಗಿದೆ.
ಬೊಮ್ಮನಹಳ್ಳಿಯಲ್ಲಿ ಇರುವ ಜೆಂಟ್ಸ್ ಪಿಜಿಯ ಪಕ್ಕದಲ್ಲೇ ಲೇಡೀಸ್ ಪಿಜಿ ಇದೆ. ಇದರ ಮಾಲೀಕರು ಒಬ್ರೇ. ಹೀಗಾಗಿ ಮಹಿಳೆಯರ ಪಿಜಿಯಲ್ಲಿ ಏನಾದರ ಕೆಲಸಗಳಿದ್ರೆ ಅವನೇ ಮುಂದೆ ನಿಂತು ಮಾಡಿಸುತ್ತಿದ್ದ.
ಇದೇ ಸಲುಗೆಯಿಂದಲೇ ಪಿಜಿಯಲ್ಲಿ ಓಡಾಡ್ತಾ ಇದ್ದ. ಇದನ್ನೇ ಬಳಿಕೊಂಡ ಆರೋಪಿ, ಹುಡುಗಿಯರ ಸ್ನಾನದ ಕೋಣೆಯಲ್ಲಿ ಮೊಬೈಲ್ ಇಳಿ ಬಿಟ್ಟು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ.
ಕಳೆದ ತಿಂಗಳೂ ಇದೇ ರೀತಿ ಮಾಡಿದ್ದಾನೆ. ನ.28 ರಂದು ರಾತ್ರಿ ಸುಮಾರು 10.30ಕ್ಕೆ ಒಬ್ಬ ಸಂತ್ರಸ್ತೆಯ ಮೊಬೈಲ್ಗೆ ಸ್ನಾನ ಮಾಡುವ ಫೋಟೋವನ್ನು ಆರೋಪಿ ಕಳುಹಿಸಿದ್ದಾನೆ. ನೀನು ನನಗೆ ಸಹಕಾರ ಕೊಡದೇ ಹೋದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇನೆ ಎಂದು ಹೇಳಿದ್ದಾನೆ.
ಲೈಂಗಿಕವಾಗಿ ನನ್ನೊಂದಿಗೆ ಸಹಕರಿಸಬೇಕು. ಆಮೇಲೆ ವೀಡಿಯೋ ಡಿಲೀಟ್ ಮಾಡ್ತೀನಿ ಅಂದಿದ್ದಾನೆ. ಕೂಡಲೇ ಸಂತ್ರಸ್ತೆ ಸಿಇಎನ್ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಇನ್ಸ್ಪೆಕ್ಟರ್ ಯೋಗೇಶ್ ತಂಡ ಯುವತಿ ಹೆಸರಿನಲ್ಲಿ ಪೊಲೀಸರೇ ಚಾಟಿಂಗ್ ನಡೆಸಿ ಲೈಂಗಿಕ ಕ್ರಿಯೆಗೆ ಒಪ್ಪಿರುವುದಾಗಿ ನಂಬಿಸಿ ಹೋಟೆಲ್ಗೆ ಕರೆಸಿಕೊಂಡಿದ್ದಾರೆ. ಅವರ ಮಾತನ್ನು ನಂಬಿ ಆತ ಪೊಲೀಸರು ಖೆಡ್ಡಾಗೆ ಬಿದ್ದಿದ್ದಾನೆ.