ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿ ಇರುವುದರಿಂದ ಈ ಪ್ರಕ್ರಿಯೆಯಲ್ಲಿ ತೊಡಗಿರುವ ಅಧಿಕಾರಿಗಳು, ಸಿಬ್ಬಂದಿ ವರ್ಗಾವಣೆಗೆ ಚುನಾವಣಾ ಆಯೋಗ ತಡೆ ನೀಡಿದೆ.
ಮತದಾರರ ಪಟ್ಟಿ ನೋಂದಣಿ ಮತ್ತು ಪರಿಷ್ಕರಣೆ ಕರ್ತವ್ಯದಲ್ಲಿರುವ ಅಧಿಕಾರಿಗಳ ವರ್ಗಾವಣೆಗೆ 2023ರ ಜನವರಿ 2ನೇ ವಾರದ ವರೆಗೆ ತಡೆ ನೀಡಿ ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ಭಾರತ ಚುನಾವಣಾ ಆಯೋಗದ ಮತದಾರರ ಪಟ್ಟಿಯ ನೋಂದಣಿ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿದ್ದು, ಈ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವರ್ಗಾವಣೆ ಮಾಡದಂತೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.
ಹೀಗಾಗಿ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವ ತಹಶೀಲ್ದಾರ್, ಉಪ ತಹಶೀಲ್ದಾರ್, ಕಂದಾಯ ನಿರೀಕ್ಷಕರು, ಶಿರಸ್ತೆದಾರ್, ಗ್ರಾಮಲೆಕ್ಕಾಧಿಕಾರಿಗಳ ವರ್ಗಾವಣೆ, ನಿಯೋಜನೆ, ಓಓಡಿ ಪ್ರಸ್ತಾವನೆಗಳನ್ನು ಜನವರಿ 2ನೇ ವಾರದವರೆಗೆ ತಡೆಹಿಡಿಯಲಾಗಿದೆ. ಮತದಾರರ ನೋಂದಣಿ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಯಮಾನಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಬಹುದು ಎಂದು ಹೇಳಲಾಗಿದೆ.