ನವದೆಹಲಿ: ಅಮೆಜಾನ್ ನಲ್ಲಿ ವಿಶ್ವದಾದ್ಯಂತ 10,000ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ವಜಾ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ, 20 ಸಾವಿರ ಉದ್ಯೋಗಿಗಳಿಗೆ ಕೊಕ್ ನೀಡಲು ಅಮೆಜಾನ್ ಸಿದ್ಧತೆ ನಡೆಸಿದೆ.
ಕೊರೊನಾ ಸಂದರ್ಭದಲ್ಲಿ ಜಾಗತಿಕವಾಗಿ ಸೇವೆಗಳ ಬೇಡಿಕೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಭಾರಿ ಪ್ರಮಾಣದಲ್ಲಿ ನೇಮಕಾತಿ ಮಾಡಿಕೊಂಡಿದ್ದ ಅಮೆಜಾನ್ ಕಂಪನಿ ಈಗ ಆರ್ಥಿಕ ಹಿಂಜರಿತದ ಭೀತಿ ಸೇರಿದಂತೆ ವಿವಿಧ ಕಾರಣಗಳಿಂದ 16 ಲಕ್ಷ ಉದ್ಯೋಗಿಗಳ ಪೈಕಿ 20,000 ಉದ್ಯೋಗಿಗಳನ್ನು ಕೈಬಿಡಲು ಚಿಂತನೆ ನಡೆಸಿದೆ.
ಅಮೆಜಾನ್ ನಲ್ಲಿರುವ ವಿತರಣಾ ನೌಕರರು, ಕಾರ್ಪೊರೇಟ್ ನಿರ್ವಾಹಕರು, ತಂತ್ರಜ್ಞಾನ ಸಿಬ್ಬಂದಿ ಸೇರಿದಂತೆ 20,000 ಉದ್ಯೋಗಿಗಳ ವಜಾಗೊಳಿಸುವ ಬಗ್ಗೆ ಪರಿಶೀಲನೆ ನಡೆಸುವಂತೆ ವ್ಯವಸ್ಥಾಪಕರಿಗೆ ಕಂಪನಿ ಸೂಚನೆ ನೀಡಿದೆ ಎಂದು ಹೇಳಲಾಗಿದೆ.