ಪುಣೆ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಬಳಿಕ ಇದೀಗ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಾರ್ಯಕರ್ತರ ಪುಂಡಾಟ ಹೆಚ್ಚಾಗಿದೆ. ಕರ್ನಾಟಕದ ಬಸ್ ಗಳನ್ನು ತಡೆದು ಮಸಿ ಬಳಿದು ಉದ್ಧಟತನ ಮೆರೆದಿದ್ದಾರೆ.
ಪುಣೆಯಿಂದ ಬೆಳಗಾವಿಗೆ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಗಳನ್ನು ಸಿಂಧದುರ್ಗ ಮಾರ್ಗ ಮಧ್ಯೆ ತಡೆದ ಎಂ ಎನ್ ಎಸ್ ಕಾರ್ಯಕರ್ತರು ಬಸ್ ಗಳಿಗೆ ಮಸಿ ಬಳಿದು, ಜೈ ಮಹಾರಾಷ್ಟ್ರ ಘೋಷಣೆಗಳನ್ನು ಕೂಗಿದ್ದಾರೆ.
ಅಲ್ಲದೇ ಪುಣೆ ಬಸ್ ಡಿಪೋಗೆ ಶಿವಸೇನೆ ಕಾರ್ಯಕರ್ತರ ಜೊತೆ ನುಗ್ಗಿದ ಎಂ ಎನ್ ಎಸ್ ಪುಂಡರು ಅಲ್ಲಿರುವ ಕರ್ನಾಟಕ ಸಾರಿಗೆ ಬಸ್ ಗಳಿಗೆ ಕೇಸರಿ ಹಾಗೂ ಕಪ್ಪು ಬಣ್ಣ ಬಳಿದು ಕರ್ನಾಟಕ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಗಡಿ ವಿವಾದದ ಬೆನ್ನಲ್ಲೇ ಉಭಯ ರಾಜ್ಯಗಳ ನಡುವಿನ ಬಸ್ ಸಂಚಾರದಲ್ಲಿಯೂ ವ್ಯತ್ಯಯವುಂಟಾಗಿದೆ.