ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕರ ವರ್ಗಾವಣೆಗಾಗಿ ರೂಪಿಸಲಾದ ಕರಡಿಗೆ ಶಿಕ್ಷಕರಿಂದ 2771 ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು, ಸೇವಾ ಅಂಕ ನೀಡಲು ಶಿಕ್ಷಕರು ಆಗ್ರಹಿಸಿದ್ದಾರೆ.
ಶಿಕ್ಷಕರ ವರ್ಗಾವಣೆ ಕಾಯ್ದೆಯನ್ನು ಶಿಕ್ಷಕರ ಸ್ನೇಹಿಯಾಗಿ ರೂಪಿಸಿದ್ದರೂ, ಆಕ್ಷೇಪಣೆಗಳ ಸಂಖ್ಯೆ ಕಡಿಮೆಯಾಗಿಲ್ಲ. ಶೇಕಡ 91 ರಷ್ಟು ಆಕ್ಷೇಪಣೆಗಳು ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಇವೆ. ಸೇವಾ ಅಂಕ ನೀಡಲು ಒತ್ತಾಯಿಸಿ 2524 ಅರ್ಜಿ ಸಲ್ಲಿಕೆಯಾಗಿದ್ದು, ಶಿಕ್ಷಣ ಇಲಾಖೆ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿದೆ.
ಆಕ್ಷೇಪಣೆ ಮತ್ತು ಉತ್ತರ ಸಹಿತ ಮಾಹಿತಿಯನ್ನು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಲಿದ್ದು, ನಂತರ ಕರಡು ನಿಯಮಗಳಿಗೆ ತಿದ್ದುಪಡಿ ತಂದು ಅಂತಿಮ ಕಾಯ್ದೆ ಬಿಡುಗಡೆ ಮಾಡಲಾಗುವುದು. ಈ ತಿಂಗಳಲ್ಲಿಯೇ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂಬ ಒತ್ತಾಯವಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.