
ಚಿತ್ರದುರ್ಗ: ಸಾರಿಗೆ ಇಲಾಖೆಯಲ್ಲಿ ಸಂಪೂರ್ಣ ಬದಲಾವಣೆ ತರಲು ಚಿಂತಿಸಲಾಗಿದೆ. ಪರಿಸರ ಸ್ನೇಹಿ ವಿದ್ಯುತ್ ಚಾಲಿತ ಬಸ್ ಖರೀದಿಗೆ ಮುನ್ನುಡಿ ಬರೆಯಲಾಗಿದ್ದು, 2030ರ ವೇಳೆಗೆ ಹಳೆಯ 30 ಸಾವಿರ ಸಾರಿಗೆ ಬಸ್‌ಗಳಿಗೆ ಬದಲಾಗಿ ವಿದ್ಯುತ್ ಚಾಲಿತ ಬಸ್‌ಗಳನ್ನು ಖರೀದಿಸಲಾಗುವುದು. ಜನವರಿ ಅಂತ್ಯದ ವೇಳೆಗೆ 50 ವಿದ್ಯುತ್ ಚಾಲಿತ, 600 ಡೀಸೆಲ್ ಚಾಲಿತ, 60 ವೋಲ್ವೋ ಬಸ್ ಖರೀದಿಸಲಾಗುತ್ತಿದೆ ಎಂದು ಸಾರಿಗೆ ಮತ್ತು ಪರಿಶಿಷ್ಠ ಪಂಗಡಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು.
ಹಿರಿಯೂರು ನಗರದ ಹುಳಿಯಾರ ರಸ್ತೆಯ ತಾಲ್ಲೂಕು ಕ್ರೀಡಾಂಗಣದ ಹತ್ತಿರ ಮಂಗಳವಾರ ನೂತನ ಬಸ್ ಘಟಕದ ಶಂಕುಸ್ಥಾಪನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ರಸ್ತೆ ಸುರಕ್ಷತೆ ಅಡಿ 250 ಕೋಟಿ ರೂ. ಅನುದಾನ ನೀಡಿದೆ. ರಾಜ್ಯಾದ್ಯಂತ ರಸ್ತೆ ಅಪಘಾತ ತಡೆಯಲು ಬ್ಲಾಕ್ ಸ್ಪಾಟ್ ಗುರುತಿಸಲಾಗುವುದು. ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತಿದೆ ಎಂದರು.
ಸಾರಿಗೆ ನೌಕರರ ಬಹುದಿನದ ಬೇಡಿಕೆಯಾದ ವೇತನ ಪರಿಷ್ಕರಣೆ ಸಂಬಂಧವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲಾಗಿದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಆದಷ್ಟು ಶೀಘ್ರವಾಗಿ ಸಾರಿಗೆ ಸಿಬ್ಬಂದಿ ವೇತನ ಪರಿಷ್ಕರಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.