ಭಾರತೀಯರಿಗೆ ಹಳದಿ ಲೋಹ ಚಿನ್ನದ ಮೇಲೆ ವ್ಯಾಮೋಹ ಎಷ್ಟಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೀಗ ಚಿನ್ನ ಖರೀದಿಸುವುದು ಮತ್ತಷ್ಟು ಸಲೀಸಾಗಿದ್ದು, ಇದಕ್ಕಾಗಿ ಅಂಗಡಿಗೆ ಹೋಗಬೇಕೆಂದಿಲ್ಲ. ಎಟಿಎಂ ಗಳಲ್ಲಿ ಹಣ ತೆಗೆದಂತೆ ಇನ್ನು ಮುಂದೆ ಚಿನ್ನವನ್ನು ಸಹ ತೆಗೆಯಬಹುದಾಗಿದೆ.
ಹೈದರಾಬಾದ್ ಮೂಲದ Goldsikka ಪ್ರೈವೇಟ್ ಲಿಮಿಟೆಡ್ ಕಂಪನಿ ತನ್ನ ಮುಖ್ಯ ಕಚೇರಿ ಇರುವ ಬೇಗಂಪೇಟೆಯ ಅಶೋಕ ರಘುಪತಿ ಚೇಂಬರ್ಸ್ ನಲ್ಲಿ ದೇಶದ ಮೊದಲ ಗೋಲ್ಡ್ ಎಟಿಎಂ ಆರಂಭಿಸಿದ್ದು, ಇದು ದಿನದ 24 ಗಂಟೆಗಳ ಕಾಲವೂ ಕಾರ್ಯ ನಿರ್ವಹಿಸಲಿದೆ.
ಎಟಿಎಂನಿಂದ ಹಣ ತೆಗೆದಷ್ಟೇ ಸುಲಭವಾಗಿ ಚಿನ್ನವನ್ನು ಖರೀದಿಸಬಹುದಾಗಿದ್ದು, ಅದಕ್ಕಾಗಿ ಗ್ರಾಹಕರು ತಮ್ಮ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ಬಳಸಬಹುದಾಗಿದೆ. 0.5 ರಿಂದ 100 ಗ್ರಾಂ ವರೆಗೆ ಈ ಎಟಿಎಂನಿಂದ ಚಿನ್ನ ಪಡೆಯಬಹುದಾಗಿದ್ದು, 5 ಕೆಜಿಯವರೆಗೆ 2 ರಿಂದ 3 ಕೋಟಿ ರೂಪಾಯಿ ಮೌಲ್ಯದ ಚಿನ್ನ ಎಟಿಎಂನಲ್ಲಿ ಇರಲಿದೆ.
ಗ್ರಾಹಕರು ತಮಗೆ ಎಷ್ಟು ಬೇಕೋ ಅಷ್ಟು ಅಂದರೆ 0.5 ಗ್ರಾಂ, 1 ಗ್ರಾಂ, 2 ಗ್ರಾಂ, 5 ಗ್ರಾಂ, 10 ಗ್ರಾಂ, 20 ಗ್ರಾಂ 50 ಗ್ರಾಂ ಹಾಗೂ 100 ಗ್ರಾಂ ವರೆಗೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ನಿಗದಿಪಡಿಸಿದ ಬೆಲೆಯನ್ನು ನಮೂದಿಸಿ ನಂತರ ತಮ್ಮ ಸಂಖ್ಯೆಯೊಂದಿಗೆ ಹಣ ಪಾವತಿಸಿ ಚಿನ್ನದ ನಾಣ್ಯಗಳನ್ನು ಪಡೆಯಬಹುದಾಗಿದೆ.
ಹಾಗೆಯೇ ಸುರಕ್ಷತೆಗಾಗಿ ಸಂಸ್ಥೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು ಎಟಿಎಂನಲ್ಲಿ ಇನ್ಬಿಲ್ಟ್ ಕ್ಯಾಮರಾ ಇರಲಿದೆ. ಜೊತೆಗೆ ಎಟಿಎಂ ಹೊರಗೂ ಸಹ ಕ್ಯಾಮೆರಾ ಅಳವಡಿಸಲಾಗಿದ್ದು, 24 ಗಂಟೆಗಳ ಸುರಕ್ಷತೆಯನ್ನು ಖಚಿತಪಡಿಸಲಾಗಿದೆ. ಒಂದೊಮ್ಮೆ ಹಣ ಪಾವತಿಯಾದರೂ ಸಹ ಎಟಿಎಂನಿಂದ ಚಿನ್ನ ಬಾರದಿದ್ದರೆ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಗ್ರಾಹಕ ಪ್ರತಿನಿಧಿಗಳು ತಕ್ಷಣವೇ ಸ್ಪಂದಿಸುತ್ತಾರೆ.