ಬೆಳಗಾವಿ: ಕನ್ನಡಿಗರ ಹೋರಾಟಕ್ಕೆ ಬೆದರಿದ ಮಹಾರಾಷ್ಟ್ರ ಸಚಿವರು ಬೆಳಗಾವಿ ಭೇಟಿಯನ್ನು ರದ್ದು ಮಾಡಿದ್ದಾರೆ. ಮಹಾರಾಷ್ಟ್ರ ಸಚಿವ ಶಂಭುರಾಜ ದೇಸಾಯಿ, ಬೆಳಗಾವಿ ಭೇಟಿಗೆ ಕರ್ನಾಟಕ ಸರ್ಕಾರ ಅವಕಾಶ ನೀಡಿಲ್ಲ ಹೀಗಾಗಿ ಬೆಳಗಾವಿಯ ಇಂದಿನ ಭೇಟಿಯನ್ನು ರದ್ದುಗೊಳಿಸಿದ್ದೇವೆ ಎಂದು ಹೇಳಿದ್ದಾರೆ.
ಮೊದಲಿಗೆ ಡಿಸೆಂಬರ್ 3 ರಂದು ಬೆಳಗಾವಿಗೆ ಭೇಟಿ ನೀಡಲು ನಿರ್ಧರಿಸಿದ್ದೆವು. ಆದರೆ, ಕೆಲವು ದಲಿತ ಸಂಘಟನೆಗಳು ಡಿಸೆಂಬರ್ 6 ರಂದು ಬರಲು ಮನವಿ ಮಾಡಿದ್ದು, ಹೀಗಾಗಿ ಡಿಸೆಂಬರ್ 6 ರಂದು ಬೆಳಗಾವಿಗೆ ತೆರಳಲು ನಿರ್ಧರಿಸಿದ್ದೆವು. ಇಂದು ಡಾ. ಬಿಆರ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನವಾಗಿದ್ದು, ಶ್ರದ್ಧಾಂಜಲಿ ಸಲ್ಲಿಕೆ ವೇಳೆ ಅಹಿತಕರ ಘಟನೆ ನಡೆಯಬಾರದು, ಕಾನೂನು ವ್ಯವಸ್ಥೆಗೆ ಧಕ್ಕೆ ಆಗಬಾರದೆಂದು ಬೆಳಗಾವಿ ಭೇಟಿ ಕ್ಯಾನ್ಸಲ್ ಮಾಡಲಾಗಿದೆ ಎಂದರು.
ಶ್ರದ್ಧಾಂಜಲಿ ಸಲ್ಲಿಕೆಗೆ ನಮಗೆ ಅನುಮತಿ ನೀಡಬಹುದಿತ್ತು. ಕರ್ನಾಟಕ ಸರ್ಕಾರ ಅವಕಾಶ ಕಲ್ಪಿಸಿದ್ರೆ ಒಳ್ಳೆಯದಾಗುತ್ತಿತ್ತು. ಆದರೆ, ಅನುಮತಿ ನೀಡಿಲ್ಲ. ಹೀಗಾಗಿ ಬೆಳಗಾವಿ ಭೇಟಿ ರದ್ದು ಮಾಡಲಾಗಿದೆ ಎಂದು ಮಹಾರಾಷ್ಟ್ರ ಸಚಿವ ಶಂಭುರಾಜ ದೇಸಾಯಿ ಹೇಳಿದ್ದಾರೆ. ಇಂದು ಬೆಳಗಾವಿಗೆ ಮಹಾರಾಷ್ಟ್ರ ಸಚಿವರಾದ ಚಂದ್ರಕಾಂತ ಪಾಟೀಲ್ ಮತ್ತು ಶಂಭುರಾಜ ದೇಸಾಯಿ ಭೇಟಿ ನೀಡಬೇಕಿತ್ತು, ಆದರೆ ಕರ್ನಾಟಕ ಸರ್ಕಾರ ಅವಕಾಶ ಕೊಟ್ಟಿಲ್ಲ.