ಅಲೋವೇರಾ ಸೌಂದರ್ಯ ವರ್ಧನೆಗೆ, ಆರೋಗ್ಯಕ್ಕೆ, ಕೂದಲ ಆರೈಕೆಗೆ ಸೇರಿದಂತೆ ಹಲವು ಕಾರಣಗಳಿಗೆ ಬಳಕೆಯಾಗುವ ಬಹೂಪಯೋಗಿ ಸಸ್ಯ. ಇದರ ಅತ್ಯುತ್ತಮ ಗುಣವೆಂದರೆ ಇದನ್ನು ಬಳಸುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ.
ಮುಖದ ತುಂಬಾ ಚಿಕ್ಕ ಚಿಕ್ಕ ಗುಳ್ಳೆಗಳು ಮೂಡಿ ಉಪಟಳ ಕೊಡುತ್ತಿವೆಯೇ, ಅಲೋವೇರಾದ ಲೋಳೆ ತೆಗೆದು ಅರ್ಧ ಚಮಚ ಜೇನುತುಪ್ಪ ಬೆರೆಸಿ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಿ. ಇಪ್ಪತ್ತು ನಿಮಿಷ ಬಳಿಕ ತಣ್ಣನೆಯ ನೀರಿನಿಂದ ಮುಖ ತೊಳೆಯಿರಿ. ಪ್ರತಿದಿನ ಒಂದು ತಿಂಗಳ ತನಕ ಹೀಗೆ ಮಾಡುವುದರಿಂದ ಮುಖದ ಮೊಡವೆ ಸಮಸ್ಯೆ ದೂರವಾಗುತ್ತದೆ.
ಕೈ ಕಾಲುಗಳಲ್ಲಿ ಕಜ್ಜಿ ಬಿದ್ದು ವಿಪರೀತ ತುರಿಕೆ ಕಾಣಿಸಿಕೊಂಡಿದೆಯೇ. ಅದರ ನಿವಾರಣೆಗೆ ಅಲೊವೇರಾ ಜೆಲ್ ಹಚ್ಚಿ. ಅದನ್ನು ಕತ್ತರಿಸಿ ತಟ್ಟೆಯಲ್ಲಿಟ್ಟರೆ ಸ್ವಲ್ಪ ಹೊತ್ತಿನಲ್ಲಿ ಜೆಲ್ ಕೆಳಗೆ ಇಳಿದಿರುತ್ತದೆ. ಅದನ್ನು ಕೈಕಾಲಿಗೆ ಹಚ್ಚಿ. ವಾರದೊಳಗೆ ನಿಮ್ಮ ತುರಿಕೆ ಸಮಸ್ಯೆ ಇಲ್ಲವಾಗುತ್ತದೆ.
ಕಣ್ಣಿನ ಕೆಳಗೆ ಕಾಣಿಸಿಕೊಳ್ಳುವ ಕಪ್ಪು ವರ್ತುಲ ನಿವಾರಣೆಗೆ, ಸುಕ್ಕುಗಟ್ಟಿದ ಮುಖಕ್ಕೆ ಅಲೋವೇರಾ ಹೇಳಿ ಮಾಡಿಸಿದ ಮದ್ದು. ಕೂದಲಿನ ಹೊಟ್ಟನ್ನು ಹೋಗಲಾಡಿಸುವ ಇದನ್ನು ಕಂಡಿಷನರ್ ರೂಪದಲ್ಲೂ ಬಳಸಬಹುದು. ಬಳಸಿದ ಬಳಿಕ ತಲೆತೊಳೆಯಲು ತುಸು ಕಷ್ಟ ಎನಿಸಿದರೂ ಇದು ಕೂದಲು ಸೊಂಪಾಗಿ, ದಪ್ಪಕ್ಕೆ ಬೆಳೆಯಲು ಅವಕಾಶ ಮಾಡಿ ಕೊಡುತ್ತದೆ.