ಕೇವಲ ಛಾಯಾಚಿತ್ರಗಳನ್ನು ತೋರಿಸುವ ಮೂಲಕ ಅಕ್ರಮ ಸಂಬಂಧದ ಬಗ್ಗೆ ಸಾಬೀತು ಮಾಡಲಾಗುವುದಿಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ. ಪತ್ನಿ ವ್ಯಭಿಚಾರ ನಡೆಸುತ್ತಿದ್ದಾಳೆ ಎಂದು ಫೋಟೋ ತೋರಿಸುತ್ತಾ ಪತಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.
ವಿವಾಹೇತರ ಸಂಬಂಧ ಹೊಂದಿದ್ದಕ್ಕಾಗಿ ಪತ್ನಿಯಿಂದ ವಿಚ್ಛೇದನ ಕೋರಿದ್ದ ಪತಿಯೊಬ್ಬ ಜೀವನಾಂಶಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ್ದ. ತನ್ನ ಪತ್ನಿ ವ್ಯಭಿಚಾರಿಣಿ ಎಂದಿದ್ದ ಆತ ಕೆಲವೊಂದು ಫೋಟೋ ತೋರಿಸಿದ್ದ. ಆದರೆ ಕೇವಲ ಫೋಟೋದಿಂದ ಇದನ್ನು ಸಾಬೀತು ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಉಮೇಶ್ ತ್ರಿವೇದಿ ಹೇಳಿದ್ದಾರೆ.
ವಿಚ್ಛೇದನ ಪಡೆದ ನಂತರ ಪತ್ನಿ ಜೀವನಾಂಶಕ್ಕೆ ಕೋರಿ ಕೌಟುಂಬಿಕ ಕೋರ್ಟ್ನಲ್ಲಿ ಈ ಹಿಂದೆ ಅರ್ಜಿ ಸಲ್ಲಿಸಿದ್ದರು. ತನಗೆ ಮತ್ತು ತನ್ನ ಹೆಣ್ಣುಮಕ್ಕಳಿಗೆ ಮಧ್ಯಂತರ ಜೀವನಾಂಶ ನೀಡುವಂತೆ ಆಕೆ ಕೋರಿದ್ದರಿಂದ ಕೋರ್ಟ್ ಪ್ರತಿ ತಿಂಗಳು ರೂ.30 ಸಾವಿರ ನೀಡುವಂತೆ ಪತಿಗೆ ಆದೇಶಿಸಿತ್ತು. ಈ ಆದೇಶದ ವಿರುದ್ಧ ಪತಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ. ತನ್ನ ಪತ್ನಿಗೆ ಅಕ್ರಮ ಸಂಬಂಧವಿದ್ದು ತಾನು ಜೀವನಾಂಶ ನೀಡಲು ಸಾಧ್ಯವಿಲ್ಲ ಎಂದಿದ್ದ. ಆದರೆ ಕೋರ್ಟ್ ಇದನ್ನು ಮಾನ್ಯ ಮಾಡಲಿಲ್ಲ.
ವ್ಯಭಿಚಾರದ ಆರೋಪಕ್ಕೆ ಸ್ಪಷ್ಟ ಸಾಕ್ಷ್ಯವನ್ನು ನೀಡಬೇಕು ಮತ್ತು ಪ್ರಸ್ತುತ ಸಲ್ಲಿಸಿರುವ ಛಾಯಾಚಿತ್ರಗಳು ಪತ್ನಿ ವ್ಯಭಿಚಾರ ಜೀವನ ನಡೆಸುತ್ತಿದ್ದಾರೆ ಎಂಬುದನ್ನು ತೋರಿಸಲು ಸಾಕಾಗುವುದಿಲ್ಲ ಎಂದು ನ್ಯಾಯಮೂರ್ತಿ ಉಮೇಶ್ ತ್ರಿವೇದಿ ಹೇಳಿದ್ದಾರೆ.