ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾಖಾನ್ ಎಂದು ಕರೆದಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿದ್ದಾರೆ. ಸಿದ್ದರಾಮಯ್ಯಗೆ ಹೆಸರಿಡಲು ಸಿ.ಟಿ.ರವಿ ಯಾರು ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹರಿಪ್ರಸಾದ್, ಸಿದ್ದರಾಮಯ್ಯಗೆ ಅವರ ತಂದೆ-ತಾಯಿ ಹೆಸರಿಟ್ಟಿದ್ದಾರೆ. ನಾಮಕರಣ ಮಾಡಲು ಸಿ.ಟಿ.ರವಿ ಯಾರು? ಮೊದಲು ಇವರ ಹೆಸರೇನು ಎಂಬುದನ್ನು ತಿಳಿದುಕೊಳ್ಳಲಿ ಎಂದು ಕಿಡಿಕಾರಿದರು.
ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಏನು ಎನ್ನುವುದು ಎಲ್ಲರಿಗೂ ಗೊತ್ತಿದೆ. ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ, ಅದನ್ನು ಬಿಟ್ಟು ಹೆಸರುಗಳನ್ನು ಇಡುವುದಲ್ಲ. ಸಿ.ಟಿ.ರವಿ ಅವರಿಗೆ ರಾಜ್ಯಕ್ಕೆ ಪ್ರಧಾನಿ ಮೋದಿ ಬಂದರೂ ಕಾಣಲಿಲ್ಲ, ಅಮಿತ್ ಶಾ ಬಂದರೂ ಕಾಣಲಿಲ್ಲ. ಅವರಿಗೆ ಬರಿ ಸಿದ್ದರಾಮಯ್ಯ ಮಾತ್ರ ಕಾಣುತ್ತಿದ್ದಾರೆ. ಸಿದ್ರಾಮುಲ್ಲಾಖಾನ್ ಎಂದು ಕರೆದು ಜನರನ್ನು ಈ ರೀತಿ ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುವುದನ್ನು ಸಿ.ಟಿ.ರವಿ ನಿಲ್ಲಿಸಲಿ ಎಂದರು.