ಬೆಂಗಳೂರು: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ತಾರಕಕ್ಕೇರಿರುವ ಬೆನ್ನಲ್ಲೇ ನಾಳೆ ಮಹಾರಾಷ್ಟ್ರ ಸಚಿವರು ಗಡಿ ಜಿಲ್ಲೆ ಬೆಳಗಾವಿಗೆ ಬರಲು ಸಿದ್ಧತೆ ನಡೆಸಿದ್ದು, ಯಾವುದೇ ಕಾರಣಕ್ಕೂ ಮಹಾ ಸಚಿವರು ರಾಜ್ಯ ಪ್ರವೇಶಿಸಲು ಬಿಡುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಂಪುಟದ ಇಬ್ಬರು ಸಚಿವರು ನಾಳೆ ಬೆಳಗಾವಿಗೆ ಬರಲು ಮುಂದಾಗಿದ್ದಾರೆ. ಯಾವ ಕಾರಣಕ್ಕೂ ರಾಜ್ಯಕ್ಕೆ ಬರಲು ಬಿಡುವುದಿಲ್ಲ ಎಂದರು.
ಮಹಾರಾಷ್ಟ್ರದಲ್ಲಿ ಎಂಇಎಸ್ ವರ್ಚಸ್ಸು ಕಡಿಮೆಯಾಗುತ್ತಿದ್ದಂತೆ ಈ ರೀತಿ ಮಾಡುತ್ತಿದ್ದಾರೆ. ಅವರಿಗೆ ಇವೆಂಟ್ ಇಲ್ಲದಾಗ ಗಡಿ ಕ್ಯಾತೆ ನೆನಪಾಗುತ್ತೆ. ಮಹಾಜನ್ ವರದಿಯೇ ಅಂತಿಮ ಎಂದು ಸುಪ್ರೀಂ ಕೋರ್ಟ್ ನಲ್ಲಿ ಸ್ಪಷ್ಟವಾಗಿದೆ. ದಾಖಲೆ ಜನಾಭಿಪ್ರಯವೂ ನಮ್ಮ ಕಡೆ ಇದೆ. ಸಚಿವರು ಗಡಿ ಪ್ರವೇಶಿಸಲು ಅವಕಾಶ ಕೊಡುವುದುದಿಲ್ಲ ಎಂದು ಹೇಳಿದರು.
ಶಿವಸೇನೆ ಒಂದು ನಾಟಕ ಕಂಪನಿ ಹಾಗಾಗಿ ಆಗಾಗ ಈ ರೀತಿ ನಾಟಕಗಳನ್ನು ಮಾಡುತ್ತಲೇ ಇರುತ್ತದೆ. ನೆಲ, ಜಲ, ಭಾಷೆ ವಿಚಾರ ಬಂದಾಗ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಇದೆಲ್ಲ ಎಲೆಕ್ಷನ್ ಸ್ಟಂಟ್. ಯಾರೂ ಬೆಲೆ ಕೊಡಲ್ಲ. ಮಹಾರಾಷ್ಟ್ರದಿಂದ ಬರುವ ಸಚಿವರು ಸ್ಟಂಟ್ ಮಾಸ್ಟರ್ಸ್. ಸವಾಲಿಗೆ ಪ್ರತಿಸವಾಲು ಎನ್ನುವುದಾದರೆ ನಾವೂ ಮಾಡುತ್ತೇವೆ. ಯಾವುದೇ ಕಾನೂನು ಸುವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ಬೆಳಗಾವಿ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದರು.