
ಕುಡಿದ ಮತ್ತಿನಲ್ಲಿದ್ದ ಚಾಲಕನೊಬ್ಬ ಆಯತಪ್ಪಿ ಬಾವಿಗೆ ಬಿದ್ದಿದ್ದು, ನಾಲ್ಕು ದಿನಗಳ ಬಳಿಕ ಆತನ ಪತ್ನಿಯೇ ಪತ್ತೆ ಹಚ್ಚಿದ್ದಾಳೆ. ನಾಲ್ಕು ದಿನಗಳ ಕಾಲ ಆತ ಬಾವಿಯಲ್ಲಿದ್ದರೂ ಸಹ ಪ್ರಾಣಾಪಾಯದಿಂದ ಪಾರಾಗಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉತ್ತರ ಪ್ರದೇಶದ ಅಲಿಘರ್ ಜಿಲ್ಲೆಯ ಜಿಲ್ಲಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಯೋಗೇಂದ್ರ ಯಾದವ್ ಎಂಬ ಈ ಟ್ರಕ್ ಚಾಲಕ ಮಣ್ಣು ಅನ್ ಲೋಡ್ ಮಾಡಲು ತೆರಳಿದ್ದ. ಈ ವೇಳೆ ಸಮೀಪದ ಹೋಟೆಲ್ ನಲ್ಲಿ ಕಂಠಪೂರ್ತಿ ಮದ್ಯ ಸೇವಿಸಿ ಊಟ ಮಾಡಿದ್ದಾನೆ.
ಮೂತ್ರ ವಿಸರ್ಜನೆಗಾಗಿ ಸಮೀಪದಲ್ಲಿದ್ದ ಬಾವಿ ಪಕ್ಕಕ್ಕೆ ಹೋಗಿದ್ದು, ಆಯತಪ್ಪಿ ಒಳಗೆ ಬಿದ್ದಿದ್ದಾನೆ. ಆತನ ಜೊತೆಗಿದ್ದವರು ಎಷ್ಟು ಹುಡುಕಾಡಿದರೂ ಪತ್ತೆಯಾಗಿಲ್ಲ. ಬಳಿಕ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡುವುದರ ಜೊತೆಗೆ ತಾವೂ ಕೂಡ ಹುಡುಕಲು ಆರಂಭಿಸಿದ್ದಾರೆ.
ನಾಲ್ಕು ದಿನಗಳ ಕಾಲ ಆತ ಪತ್ತೆಯಾಗಿಲ್ಲ. ಆಗ ಆತನ ಪತ್ನಿ ಶ್ರದ್ಧಾ ಮತ್ತೊಮ್ಮೆ ಆತ ಕಾಣೆಯಾಗಿದ್ದ ಪ್ರದೇಶಕ್ಕೆ ಹೋಗಿದ್ದು ಬಾವಿಯಲ್ಲಿ ಪತಿಯ ಸ್ವೆಟರ್ ನೋಡಿದ್ದಾಳೆ. ಒಳಗೆ ಇಣುಕಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತಿ ಬಿದ್ದಿರುವುದು ಗೊತ್ತಾಗಿದೆ.
ಕೂಡಲೇ ಅಕ್ಕಪಕ್ಕದವರ ಸಹಾಯದಿಂದ ಆತನನ್ನು ಹೊರ ತೆಗೆದಿದ್ದು ಇದೀಗ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟ್ಟು ಬಿಡದೆ ಪತಿಯ ಹುಡುಕಾಟದಲ್ಲಿ ಯಶಸ್ವಿಯಾದ ಶ್ರದ್ದಾಳ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.