ಕತಾರ್: ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ನ ಇನ್ನೊಂದೆಡೆ ಒಂಟೆ ಸ್ಪರ್ಧೆಯು ಆಕರ್ಷಣೆಯ ಕೇಂದ್ರಬಿಂದುವಾಗಿದೆ.
ದೋಹಾ ಮತ್ತು ಸಾಕರ್ ವಿಶ್ವಕಪ್ನಿಂದ ಸುಮಾರು 15 ಮೈಲಿ (25 ಕಿಲೋಮೀಟರ್) ದೂರದಲ್ಲಿರುವ ಕತಾರಿ ಮರುಭೂಮಿಯಲ್ಲಿ ನಡೆದ ವಿಶ್ವಕಪ್ ಸಂದರ್ಭದಲ್ಲಿ ಈ ಒಂಟೆಗಳ ಸ್ಪರ್ಧೆ ಬಲು ಕುತೂಹಲ ಮೂಡಿಸಿದೆ. ಮೆಜೇಯಾನ್ ಕ್ಲಬ್ನಲ್ಲಿ ನಡೆದ ಸ್ಪರ್ಧೆಯನ್ನು ಗೆಲ್ಲಲು ಈ ಒಂಟೆಗಳು ಹಲವಾರು ಸುತ್ತುಗಳ ಕಸರತ್ತು ನಡೆಸಿವೆ.
ವಿಶ್ವಕಪ್ ನೋಡಲು ಬಂದ ಪ್ರವಾಸಿಗರಿಗೆ ಕತಾರ್ನ ಸಾಂಸ್ಕೃತಿಕ ದರ್ಶನವನ್ನು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕ್ರೀಡಾ ಮತ್ತು ಯುವ ಸಚಿವಾಲಯದ ಪ್ರಾಯೋಜಕತ್ವದಲ್ಲಿ ಒಂಟೆಗಳ ಸ್ಪರ್ಧೆ ನಡೆಸಲಾಗಿದೆ.
ಈ ಪೈಪೋಟಿಯಲ್ಲಿ 15 ಒಂಟೆಗಳು ಭಾಗವಹಿಸಿದ್ದವು. ಇವುಗಳಲ್ಲಿ ಬಹು ಆಕರ್ಷಕವಾಗಿ ಕಂಡದ್ದು ನಝಾ ಎಂಬ ಒಂಟೆ. ಶುದ್ಧ ತಳಿಯ ಹೆಣ್ಣು ಒಂಟೆಗಳು ಪ್ರಮುಖ ಆಕರ್ಷಣೆಯಾಗಿದ್ದವು. ಇದರಲ್ಲಿ ಒಂಟೆಗಳ ಹಾಲು ಕರೆಯುವ ಸ್ಪರ್ಧೆಯೂ ಇತ್ತು. ಹೆಚ್ಚು ಹಾಲು ಉತ್ಪಾದಿಸುವ ಒಂಟೆಗೆ ಬಹುಮಾನ ನೀಡುವ ಯೋಜನೆಯನ್ನೂ ಹಮ್ಮಿಕೊಳ್ಳಲಾಗಿತ್ತು. ಒಟ್ಟಿನಲ್ಲಿ ಫಿಫಾ ವಿಶ್ವಕಪ್ ಸವಿಯಲು ಬಂದವರಿಗೆ ಒಂಟೆಗಳು ರಸದೌತಣ ಬಡಿಸಿದವು.