ಬೆಂಗಳೂರು: ಎಲೆಕ್ಟ್ರಿಕ್ ವಾಹನ ಬಳಕೆಗೆ ಉತ್ತೇಜನ ನೀಡಲು ಸರ್ಕಾರ ನೂತನ ನೀತಿ ಜಾರಿಗೆ ಮುಂದಾಗಿದೆ. ರಾಜ್ಯಾದ್ಯಂತ ನಗರ ಪಟ್ಟಣಗಳಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್ ಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ.
ರಾಜ್ಯಾದ್ಯಂತ ಹೆದ್ದಾರಿಗಳಲ್ಲಿ, ಎರಡನೇ ಮತ್ತು ಮೂರನೇ ಸ್ತರದ ನಗರ, ಪಟ್ಟಣಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ ನೂತನ ನೀತಿಗೆ ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ಅನುಮೋದನೆ ನೀಡುವ ಸಾಧ್ಯತೆ ಇದೆ.
ವಿದ್ಯುತ್ ಸರಬರಾಜು ಕಂಪನಿಗಳನ್ನು ನೋಡಲ್ ಏಜೆನ್ಸಿಗಳಾಗಿ ಆಯ್ಕೆ ಮಾಡಲಾಗುವುದು. ಹೆದ್ದಾರಿಗೆ ಹೊಂದಿಕೊಂಡ ಎಲ್ಲ ಸಣ್ಣಪುಟ್ಟ ಪಟ್ಟಣ ನಗರಗಳಲ್ಲಿಯೂ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಿದ್ದು, ಆರಂಭದಲ್ಲಿ 1,200 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
ಹೆದ್ದಾರಿ ಟೋಲ್ ಗಳ ಎರಡು ಬದಿಗಳಲ್ಲಿ, ಆರ್ಟಿಓ ಕಚೇರಿ, ರೈಲು ನಿಲ್ದಾಣ, ಎಸ್ಕಾಂ ಕಚೇರಿ ಸೇರಿದಂತೆ ಹಲವು ಕಡೆಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಲಾಗುವುದು. ಪಟ್ಟಣ ಪ್ರದೇಶದಲ್ಲಿ ಜಾಗ ಹೊಂದಿದವರು ವಿದ್ಯುತ್ ಸರಬರಾಜು ಕಂಪನಿಗಳ ಸಹಾಯ ಯೋಗದಲ್ಲಿ ಚಾರ್ಜಿಂಗ್ ಪಾಯಿಂಟ್ ಸ್ಥಾಪನೆ ಮಾಡಬಹುದು. ಗುಣಮಟ್ಟದ, ನಿರಂತರ ವಿದ್ಯುತ್ ಸಂಪರ್ಕ, ಪ್ರತ್ಯೇಕ ಟ್ರಾನ್ಸ್ ಫಾರ್ಮರ್ ಮೂಲ ಸೌಕರ್ಯಗಳನ್ನು ಎಸ್ಕಾಂ ಕಲ್ಪಿಸಲಿದ್ದು, ಎಸ್ಕಾಂ ಮತ್ತು ಜಾಗದ ಮಾಲೀಕರ ನಡುವೆ ಲಾಭ ಹಂಚಿಕೆಯಾಗಲಿದೆ. ಇಂತಹ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಭೂಪರಿವರ್ತನೆ ಮಾಡಲು ವಿನಾಯಿತಿ ನೀಡಲಾಗುವುದು ಎಂದು ಹೇಳಲಾಗಿದೆ.