ಮುಂಬೈ: ಪತಿ ಸ್ಲೋ ಪಾಯ್ಸನಿಂಗ್ ನಿಂದ ಸಾವನ್ನಪ್ಪಿದ ನಂತರ ಮುಂಬೈ ಪೊಲೀಸರು ಮಹಿಳೆ ಮತ್ತು ಆಕೆಯ ಗೆಳೆಯನನ್ನು ಬಂಧಿಸಿದ್ದಾರೆ.
ಕಮಲ್ ಕಾಂತ್ ಶಾ ಎಂದು ಗುರುತಿಸಲಾದ ಸಾಂತಾಕ್ರೂಜ್ ಉದ್ಯಮಿಯೊಬ್ಬರು ತಮ್ಮ ಪತ್ನಿ ಮತ್ತು ಆಕೆಯ ಪ್ರಿಯಕರನ ಮಾರಣಾಂತಿಕ ಸಂಚಿಗೆ ಬಲಿಯಾಗಿದ್ದಾರೆ. ಸ್ವಾಭಾವಿಕ ಸಾವಿನಂತೆ ತೋರುತ್ತಿದ್ದ ವ್ಯಕ್ತಿಯ ಸಾವು ನಿಜವಾಗಿಯೂ ಯೋಜಿತ ಕೊಲೆ ಎಂದು ತಿಳಿದು ಮುಂಬೈ ಪೊಲೀಸರು ಆಘಾತಕ್ಕೊಳಗಾಗಿದ್ದಾರೆ.
ಮೃತನ ಪತ್ನಿ ತನ್ನ ಪ್ರಿಯಕರನ ಸಹಾಯದಿಂದ ಆ ವ್ಯಕ್ತಿಗೆ ‘ಸ್ಲೋ ಪಾಯ್ಸನಿಂಗ್’ ನೀಡಿ ಕೊಲ್ಲಲು ಸಂಚು ರೂಪಿಸಿದ್ದಳು. ಮುಂಬೈ ಕ್ರೈಂ ಬ್ರಾಂಚ್ ಕಮಲ್ ಕಾಂತ್ ಶಾ ಹತ್ಯೆಗೆ ಕಾರಣರಾದ ಮಹಿಳೆ ಮತ್ತು ಆಕೆಯ ಸ್ನೇಹಿತನನ್ನು ಬಂಧಿಸಿದೆ.
ಪೊಲೀಸರ ಪ್ರಕಾರ, ಕವಿತಾ ಎಂದು ಗುರುತಿಸಲ್ಪಟ್ಟ ಮಹಿಳೆ ಕೆಲವು ವರ್ಷಗಳ ಹಿಂದೆ ತನ್ನ ಪತಿ ಕಮಲ್ ಕಾಂತ್‌ನಿಂದ ಬೇರ್ಪಟ್ಟಿದ್ದರು, ಆದರೆ, ನಂತರ ತಮ್ಮ ಮಗುವಿನ ಭವಿಷ್ಯಕ್ಕಾಗಿ ಸಾಂತಾಕ್ರೂಜ್ ನಲ್ಲಿರುವ ಅವರ ಮನೆಗೆ ತೆರಳಿದ್ದರು.
ಕಮಲ್ ಕಾಂತ್ ಅವರು ಸೆಪ್ಟೆಂಬರ್ 3 ರಂದು ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು 17 ದಿನಗಳ ನಂತರ ನಿಧನರಾದರು. ಆರಂಭದಲ್ಲಿ ಇದೊಂದು ಸಹಜ ಸಾವಿನಂತೆ ಕಂಡು ಬಂದು ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ, ಸಂಚು ಶಂಕಿಸಿ, ತನಿಖೆಯನ್ನು ಅಪರಾಧ ವಿಭಾಗಕ್ಕೆ ಹಸ್ತಾಂತರಿಸಲಾಯಿತು.
ಕ್ರೈಂ ಬ್ರಾಂಚ್ ತನಿಖೆ ಆರಂಭಿಸಿದ್ದು, ಪತ್ನಿ ಸೇರಿದಂತೆ ಕುಟುಂಬದ ಸದಸ್ಯರ ಹೇಳಿಕೆಗಳು ಸೇರಿದಂತೆ ಎಲ್ಲಾ ವೈದ್ಯಕೀಯ ವರದಿಗಳನ್ನು ತೆಗೆದುಕೊಂಡಿದ್ದು, ಕಮಲ್ ಕಾಂತ್ ಅವರ ಆಹಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿದೆ.
ತನಿಖೆಯಲ್ಲಿ ಪತ್ನಿ ಮತ್ತು ಆಕೆಯ ಸ್ನೇಹಿತ ಉದ್ದೇಶಪೂರ್ವಕವಾಗಿ ಮೃತನ ಆಹಾರ ಮತ್ತು ನೀರಿನಲ್ಲಿ ಆರ್ಸೆನಿಕ್ ಮತ್ತು ಥಾಲಿಯಮ್ ಬೆರೆಸಿ ಆತನನ್ನು ಹಂತಹಂತವಾಗಿ ಸಾಯಿಸಿರುವುದು ಬೆಳಕಿಗೆ ಬಂದಿದೆ. ಈ ಲೋಹಗಳು ದೇಹದೊಳಗಿನ ರಕ್ತದಲ್ಲಿ ಈಗಾಗಲೇ ಇವೆ, ಆದರೆ ಅದು ಸಾಮಾನ್ಯಕ್ಕಿಂತ ಹೆಚ್ಚಿದ್ದರೆ, ಅದು ವಿಷವಾಗಿ ಕಾರ್ಯನಿರ್ವಹಿಸುತ್ತದೆ. ಇದೇ ರೀತಿ ಕಮಲ್ ಕಾಂತ್ ಸಾವು ಸಂಭವಿಸಿದೆ.
ನಿಧಾನ ವಿಷದ ಕಾರಣದಿಂದಾಗಿ ಆತನ ಆರೋಗ್ಯ ಸ್ಥಿತಿಯು ಹದಗೆಡುತ್ತಲೇ ಇತ್ತು. ಅವರನ್ನು ಸೆಪ್ಟೆಂಬರ್ 3 ರಂದು ಬಾಂಬೆ ಆಸ್ಪತ್ರೆಗೆ ದಾಖಲಿಸಲಾಯಿತು. ಸೆಪ್ಟೆಂಬರ್ 19 ರವರೆಗೆ ಚಿಕಿತ್ಸೆ ನೀಡಲಾಯಿತು. ಆದರೆ ಉಳಿಸಲಾಗಲಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.