ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಆಪ್ ಆಧಾರಿತ ಟ್ಯಾಕ್ಸಿ, ಕ್ಯಾಬ್, ಬೈಕ್ ಚಾಲಕರಿಂದ ಕಿರುಕುಳ, ಲೈಂಗಿಕ ದೌರ್ಜನ್ಯ, ಸುಲಿಗೆಯಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆಪ್ ಆಧಾರಿತ ವಾಹನಗಳ ಕಂಪನಿಗೆ ಕಠಿಣ ನಿಯಮ ಜಾರಿಗೊಳಿಸಿದ್ದಾರೆ.
ಆಪ್ ಆಧಾರಿತ ಅಗತ್ಯ ಸೇವಾ ಕಂಪನಿಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿದ ಕಮೀಷನರ್ ಪ್ರತಾಪ್ ರೆಡ್ಡಿ, ಕ್ಯಾಬ್, ಟ್ಯಾಕ್ಸಿ ಚಾಲಕರಿಂದ, ಸಿಬ್ಬಂದಿಯಿಂದ ಅಪರಾಧ ಪ್ರಕರಣಗಳು ನಡೆದರೆ ಕಂಪನಿಯನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಕಂಪನಿಗಳು ಕೆಲಸಕ್ಕೆ ಸೇರುವವರ ಹಿನ್ನೆಲೆ ಪರಿಶೀಲಿಸಬೇಕು. ಅವರ ವಿಳಾಸ, ಮಾಹಿತಿಗಳನ್ನು ಪರಿಶೀಲನೆ ನಡೆಸುವುದು ಕಡ್ಡಾಯ. ಅಪರಾಧ ಹಿನ್ನೆಲೆಯುಳ್ಳವರನ್ನು ಕೆಲಸಕ್ಕೆ ಸೇರಿಸಿಕೊಳ್ಳುವಂತಿಲ್ಲ. ಸಿಬ್ಬಂದಿ ನೇಮಕವಾದ ಬಳಿಕ ತಿಂಗಳಿಗೊಮ್ಮೆ ಅವರ ಹಿನ್ನೆಲೆ ಪರಿಶೀಲನೆ, ಕೆಲಸದ ಮೇಲೆ ನಿಗಾ ವಹಿಸುವುದು ಕಡ್ಡಾಯ. ನೇಮಕವಾದ ಬಳಿಕ ಸಂಪೂರ್ಣ ಮಾಹಿತಿ ಕಂಪನಿ ಆಪ್ ನಲ್ಲಿ ನಮೂದಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.