ಇಂದಿನಿಂದ ಎರಡು ದಿನಗಳ ಕಾಲ ಕೇಂದ್ರ ಚುನಾವಣಾ ಆಯೋಗದ ವತಿಯಿಂದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಹಾಗೂ ವಿಶೇಷ ಅಭಿಯಾನ ನಡೆಯುತ್ತಿದ್ದು, ವಿಳಾಸ ಬದಲಾವಣೆ, ತಿದ್ದುಪಡಿ, ಹೆಸರು ತೆಗೆಸಲು ಹಾಗೂ ಸೇರ್ಪಡೆಗೆ ಅವಕಾಶವಿದೆ. ಸಾರ್ವಜನಿಕರು ಇಂದು ಮತ್ತು ನಾಳೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಸಮೀಪದ ಮತಗಟ್ಟೆಗೆ ತೆರಳಿ ಅಥವಾ ಆನ್ ಲೈನ್ ಮೂಲಕ ಈ ಕಾರ್ಯ ಮಾಡಬಹುದಾಗಿದೆ.
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಸಹ ಈ ಸಂದರ್ಭದಲ್ಲಿ ಪರಿಶೀಲಿಸಬಹುದಾಗಿದೆ. ಅಲ್ಲದೇ ಮತಗಟ್ಟೆಯಲ್ಲಿ ಅಧಿಕಾರಿಗಳು ಉಪಸ್ಥಿತರಿರಲಿದ್ದು, ವಿಳಾಸ ಬದಲಾವಣೆ, ತಿದ್ದುಪಡಿ, ಹೆಸರು ತೆಗೆಸಲು ಹಾಗೂ ಸೇರ್ಪಡೆ ಮಾಡಬಹುದಾಗಿದೆ.
ಇಂದು ಮತ್ತು ನಾಳೆ ಈ ವಿಶೇಷ ನೋಂದಣಿ ಕಾರ್ಯ ನಡೆಯಲಿದ್ದು, ಸಾರ್ವಜನಿಕರು ಮತಗಟ್ಟೆಗೆ ಭೇಟಿ ನೀಡುವ ಮೂಲಕ ಅಥವಾ ಸ್ವತಃ ಚುನಾವಣಾ ಶಾಖೆಯ ಜಾಲತಾಣ http://www.nvsp.in ಮತ್ತು http://voterportal.eci.gov.in ಭೇಟಿ ನೀಡಿ ಈ ಕಾರ್ಯವನ್ನು ಮಾಡಬಹುದಾಗಿದೆ. ಅಥವಾ ಸಹಾಯವಾಣಿ voter helpline application ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಹೊಸದಾಗಿ ಹೆಸರು ಸೇರ್ಪಡೆ ಮಾಡುವುದಿದ್ದರೆ ನಮೂನೆ 6, ಮತದಾರರು ಸ್ಥಳಾಂತರವಾಗಿದ್ದರೆ, ಮೃತಪಟ್ಟಿದ್ದರೆ, ಹೆಸರು ಪುನರಾವರ್ತನೆಯಾಗಿದ್ದರೆ, ಹೆಸರು ತೆಗೆಯಲು ನಮೂನೆ 7 ಹಾಗೂ ಹೆಸರು ಮತ್ತಿತರ ತಿದ್ದುಪಡಿಗಳಿದ್ದರೆ ನಮೂನೆ 8 ರಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.