ಮಾನವನ ದುರಾಸೆಯಿಂದಾಗಿ ಕಾಡು ನಾಶವಾಗುತ್ತಿದ್ದು, ಇದರ ಜೊತೆಗೆ ವನ್ಯಜೀವಿಗಳ ಹತ್ಯೆಯೂ ನಡೆಯುತ್ತಿದೆ. ಅಲ್ಲದೆ ಕೆಲವೊಂದು ಪ್ರಾಣಿಗಳನ್ನು ಹಿಡಿದು ಮಾರಾಟ ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಪರಿಸರ ಅರಣ್ಯ ಸಚಿವಾಲಯದ ವನ್ಯಜೀವಿ ವಿಭಾಗ ಮಹತ್ವದ ಹೆಜ್ಜೆ ಇರಿಸಿದ್ದು, ವನ್ಯಜೀವಿಗಳ ಬೇಟೆ ಹಾಗೂ ಅಕ್ರಮ ಮಾರಾಟ ಕಂಡುಬಂದಲ್ಲಿ ದೂರು ನೀಡುವ ಸಲುವಾಗಿ ಟೋಲ್ ಫ್ರೀ ಸಂಖ್ಯೆಯನ್ನು ಆರಂಭಿಸಿದೆ.
ಸಾರ್ವಜನಿಕರು ತಮಗೆ ತಿಳಿದು ಬಂದ ಮಾಹಿತಿಯನ್ನು ರಾಷ್ಟ್ರಮಟ್ಟದ ಸಹಾಯವಾಣಿ ಸಂಖ್ಯೆ 1800-11-9334 ಗೆ ಉಚಿತವಾಗಿ ಕರೆ ಮಾಡಿ ತಿಳಿಸಬಹುದಾಗಿದೆ. ಕೇಂದ್ರದಿಂದ ಈ ಕುರಿತು ಎಲ್ಲ ರಾಜ್ಯಗಳ ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸುತ್ತೋಲೆ ಕಳುಹಿಸಲಾಗಿದೆ.