ಬೆಳಗಾವಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳದ ಬಗ್ಗೆ ಕಾನೂನು ಸಮರಕ್ಕೂ ಸಿದ್ಧವಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗದ ಸಾಲಹಳ್ಳಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಸಿಎಂ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ನ್ಯಾಯ ಕೊಡಿಸುತ್ತೇವೆ. ಮೀಸಲಾತಿ ಹೆಚ್ಚಳದ ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದ್ದೇವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ಸಮರಕ್ಕೂ ಸಿದ್ಧವಾಗಿದ್ದೇವೆ ಎಂದು ಘೋಷಿಸಿದ್ದಾರೆ.
40 ವರ್ಷಗಳ ಬೇಡಿಕೆಯಾದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸುವ ಮನವಿಗೆ ಸ್ಪಂದಿಸದವರು ಈಗ ನಮ್ಮಿಂದಲೇ ರಕ್ಷಣೆ ಎಂದು ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದವರು ಮುಖ್ಯ ವಾಹಿನಿಗೆ ಬರಬೇಕೆಂಬ ಸಂಕಲ್ಪ ಅವರಲ್ಲಿ ಇರಲಿಲ್ಲ. ವೋಟ್ ಬ್ಯಾಂಕ್ ಆಗಿ ಆ ಸಮುದಾಯ ಪರಿಗಣಿಸಿದ್ದರು. ಅಂತಹ ಸಮುದಾಯಗಳು ಸುಶಿಕ್ಷಿತರಾದರೆ ಪ್ರಶ್ನಿಸುತ್ತಾರೆ ಎನ್ನುವ ಭಯ ಅವರಲ್ಲಿತ್ತು ಎಂದರು.
ಶೋಷಿತ ಅಂತಹ ಸಮುದಾಯಗಳಿಗೆ ನ್ಯಾಯ ಕೊಡಲೇಬೇಕು ಎಂದು ತೀರ್ಮಾನಿಸಿ ಎಲ್ಲಾ ಕಾನೂನು ಸಮರಕ್ಕೆ ಸಿದ್ಧವಾಗಿಯೇ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಕ್ರಾಂತಿಕಾರಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.