ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ ಇಬ್ಬರು ಬಾಲಕರು 13 ವರ್ಷದ ಸಹಪಾಠಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮುಂಬೈನ ಮಾಟುಂಗಾ ಪ್ರದೇಶದ ಸರ್ಕಾರಿ ಶಾಲೆಯೊಂದರ ತರಗತಿಯೊಳಗೆ ನಡೆದಿದೆ. ಆರೋಪಿ ಬಾಲಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಘಟನೆ ನವೆಂಬರ್ 28 ರಂದು ಸೋಮವಾರ ನಡೆದಿದೆ. 7ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಶಾಲೆಯ ಕಾರ್ಯಕ್ರಮವೊಂದರಲ್ಲಿ ತನ್ನ ಇಬ್ಬರು ಸಹಪಾಠಿಗಳಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು. ಅಪರಾಧ ನಡೆದಾಗ ಇತರ ವಿದ್ಯಾರ್ಥಿಗಳು ನೃತ್ಯ ಅಭ್ಯಾಸ ವಿಭಾಗಕ್ಕೆ ತೆರಳಿದ್ದರು. ಬಾಲಕಿ ಇತರರನ್ನು ಹಿಂಬಾಲಿಸಿ ಶಾಲೆಯ ಸಭಾಂಗಣಕ್ಕೆ ಹೋಗುತ್ತಿದ್ದಾಗ ಆರೋಪಿಗಳಿಬ್ಬರು ಆಕೆಯನ್ನು ತಡೆದಿದ್ದಾರೆ. ಪರಿಸ್ಥಿತಿಯ ಲಾಭ ಪಡೆದು ಈ ಕೃತ್ಯ ಎಸಗಿದ್ದಾರೆ ಎಂದು ಮಾಟುಂಗಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹುಡುಗಿ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ ನಂತರ ದೂರು ದಾಖಲಿಸಲಾಗಿದೆ. ದೂರಿನ ಆಧಾರದ ಮೇಲೆ ಪೊಲೀಸರು ಬಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಾಲಕರನ್ನು ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಿ ದಕ್ಷಿಣ ಮುಂಬೈನ ಡೋಂಗ್ರಿಯಲ್ಲಿರುವ ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಲಾಗಿದೆ.