ಬೆಂಗಳೂರು: ಕನ್ನಡ ಬಾವುಟ ಹಿಡಿದ ಕಾಲೇಜು ವಿದ್ಯಾರ್ಥಿ ಮೇಲೆ ಮರಾಠಿ ವಿದ್ಯಾರ್ಥಿಗಳ ಹಲ್ಲೆ ಪ್ರಕರಣದ ಬೆನ್ನಲ್ಲೇ ಹಲ್ಲೆಗೊಳಗಾದ ವಿದ್ಯಾರ್ಥಿಗೆ ಪೊಲೀಸರಿಂದಲೂ ಥಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಬೆಳಗಾವಿ ಜಿಲ್ಲಾಡಳಿತಕ್ಕೆ ಕರವೇ ರಾಜ್ಯಾದ್ಯಕ್ಷ ನಾರಾಯಣಗೌಡ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣಗೌಡ, ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದದ ಬೆನ್ನಲ್ಲೇ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡ ಬಾವುಟ ಹಿಡಿದ ಕಾಲೇಜು ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನೆಪದಲ್ಲಿ ಪೊಲೀಸ್ ಅಧಿಕಾರಿಗಳು ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿ ಹೇಳುತ್ತಿದ್ದಾನೆ. ಕನ್ನಡ ಬಾವುಟ ಹಾರಿಸಿದ್ದಕ್ಕೆ ಹಲ್ಲೆಯಾಗುತ್ತದೆ ಎನ್ನುವುದಾದರೆ ನಾವು ಬೆಳಗಾವಿಗೆ ಹೋಗಿ ಸಾವಿರಾರು ಬಾವುಟಗಳನ್ನು ಹಾರಿಸುತ್ತೇವೆ. ಅದ್ಯಾವ ಅಧಿಕಾರಿ ತಡೆಯುತ್ತಾನೆ ನೋಡೋಣ ಎಂದು ಗುಡುಗಿದ್ದಾರೆ.
ಬೆಳಗಾವಿ ನಮ್ಮ ನೆಲ, ನಮ್ಮ ನೆಲದಲ್ಲಿ ಕನ್ನಡ ಬಾವುಟ ಹಾರಿಸಲು ಯಾರ ಅಪ್ಪಣೆ ಪಡೆದುಕೊಳ್ಳಬೇಕಿಲ್ಲ. ಹಲ್ಲೆ ನಡೆಸಿದ ಅಧಿಕಾರಿಗಳಿಬ್ಬರನ್ನು ರಾಜ್ಯ ಸರ್ಕಾರ ತಕ್ಷಣ ಅಮಾನತುಗೊಳಿಸಬೇಕು. ಇಲ್ಲವಾದಲ್ಲಿ ಕರವೇ ಕಾರ್ಯಕರ್ತರು ಬೆಳಗಾವಿ ಪ್ರವೇಶಿಸುತ್ತಾರೆ. ಮುಂದೆ ಆಗುವ ಅನಾಹುತಕ್ಕೆ ಸರ್ಕಾರ, ಜಿಲ್ಲಾಡಳಿತವೇ ನೇರ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.