ಬೆಂಗಳೂರು: ಮದುವೆ ಕಾರ್ಯಕ್ರಮ, ಪ್ರತಿಭಟನೆ, ಹೀಗೆ ಅನೇಕ ಕಾರ್ಯಕ್ರಮಗಳಿಗೆ ಒಪ್ಪಂದದ ಮೇರೆಗೆ ಕೆ ಎಸ್ ಆರ್ ಟಿ ಸಿ ಬಸ್ ಬಳಸಲಾಗುತ್ತದೆ. ಈ ಬಸ್ ಗಳನ್ನು ಬಳಕೆ ಮಾಡಿಕೊಳ್ಳಲು ಇಷ್ಟು ದಿನ ಒಂದು ದರ ನಿಗದಿ ಮಾಡಲಾಗಿತ್ತು. ಇದೀಗ ಈ ದರ ಏರಿಕೆ ಮಾಡಲಾಗಿದ್ದು, ಇಂದಿನಿಂದ ಇದು ಜಾರಿಗೆ ಬರಲಿದೆ. ಇನ್ನು ಈ ಮೊದಲೇ ಬುಕ್ ಮಾಡಿದ ಬಸ್ ಗಳಿಗೆ ಹಳೆಯ ದರವೇ ಇರಲಿದೆ.
ಹೌದು, ಒಪ್ಪಂದದ ಮೇರೆಗೆ ತೆರಳುವ ಬಸ್ ದರ ಪರಿಷ್ಕರಣೆಯನ್ನು ಕೆ ಎಸ್ ಆರ್ ಟಿ ಸಿ ಮಾಡಿದೆ. ಪರಿಷ್ಕೃತ ದರದಂತೆ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಗಳಿಗೆ ಕನಿಷ್ಠ 300 ಕಿಲೋಮೀಟರ್ ದಿನಕ್ಕೆ ನಿಗದಿಯಂತೆ ರಾಜ್ಯದೊಳಗೆ ಪ್ರಯಾಣಿಸಲು ಪ್ರತಿ ಕಿ.ಮೀ.ಗೆ 44 ರೂ. ನಿಗದಿ ಮಾಡಲಾಗಿದೆ. ಇನ್ನು ಅಂತಾರಾಜ್ಯಗಳಿಗೆ ತೆರಳುವ ಬಸ್ಗಳಿಗೆ ಪ್ರತಿ ಕಿ.ಮೀ. ಗೆ 47 ರೂ. ನಿಗದಿಪಡಿಸಲಾಗಿದೆ.
ಕೇವಲ ನಾರ್ಮಲ್ ಬಸ್ ಅಷ್ಟೆ ಅಲ್ಲ ಇನ್ನಿತರ ಎಲ್ಲಾ ಬಸ್ ಗಳ ದರ ಏರಿಕೆಯಾಗಿದೆ. ರಾಜಹಂಸ ಎಕ್ಸಿಕ್ಯೂಟಿವ್ ರಾಜ್ಯದೊಳಗೆ ಸಂಚಾರ ಮಾಡಲು 46 ರೂ. ನಿಗದಿಯಾಗಿದೆ. ಇನ್ನು ಇದೇ ಬಸ್ ಅಂತಾರಾಜ್ಯ ಸಂಚಾರಕ್ಕೆ ಕಿ.ಮೀ.ಗೆ 51 ರೂ. ನಿಗದಿ ಮಾಡಲಾಗಿದೆ.
ರಾಜಹಂಸ 39 ಆಸನಗಳ ಬಸ್ ದರವನ್ನು 300 ಕಿಲೋಮೀಟರ್ ದಿನಕ್ಕೆ ಕನಿಷ್ಠ ನಿಗದಿಪಡಿಸಿದ್ದು ರಾಜ್ಯದೊಳಗೆ 49 ರೂ., ಹೊರರಾಜ್ಯಕ್ಕೆ 53 ರೂ. ನಿಗದಿ ಪಡಿಸಲಾಗಿದೆ. ರಾಜಹಂಸ 12 ಮೀಟರ್ ಚಾಸಿಸ್ನ 44 ಆಸನಗಳ ಬಸ್ ದರವನ್ನು 300 ಕಿಲೋಮೀಟರ್ ಕನಿಷ್ಠ ದಿನಕ್ಕೆ ನಿಗದಿ ಮಾಡಲಾಗಿದ್ದು, ರಾಜ್ಯದೊಳಗೆ ಸಂಚಾರ ಮಾಡಲು 51 ರೂ. ಪ್ರತಿ ಕಿ.ಮೀ. ಗೆ ಹಾಗೂ ಹೊರ ರಾಜ್ಯಗಳಿಗೆ ಪ್ರತಿ ಕಿ.ಮೀ ಗೆ 55 ರೂಪಾಯಿ ನಿಗದಿ ಮಾಡಲಾಗಿದೆ.