ತನ್ನ ಪುತ್ರಿಯ ವಿವಾಹ ಸಮಾರಂಭಕ್ಕಾಗಿ ಕುಟುಂಬ ಸಮೇತ ಭಾರತಕ್ಕೆ ಆಗಮಿಸಿದ್ದ ಅನಿವಾಸಿ ಭಾರತೀಯ ವ್ಯಕ್ತಿ, ಹೋಟೆಲ್ ಗೆ ತೆರಳುವ ವೇಳೆ ಕ್ಯಾಬ್ ನಲ್ಲಿಯೇ ಕೋಟಿ ರೂಪಾಯಿ ಮೌಲ್ಯದ ಆಭರಣಗಳನ್ನು ಬಿಟ್ಟಿದ್ದು, ಕೇವಲ ನಾಲ್ಕು ಗಂಟೆಗಳ ಅಂತರದಲ್ಲಿ ಇವುಗಳು ಮರಳಿ ಸಿಕ್ಕಿವೆ.
ಇಂಥದೊಂದು ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದ್ದು, ಯುಕೆ ಮೂಲದ ನಿಖಿಲೇಶ್ ಕುಮಾರ್ ಸಿನ್ಹಾ ಎಂಬವರು ತಮ್ಮ ಮಗಳ ಮದುವೆ ಸಲುವಾಗಿ ಲಂಡನ್ನಿಂದ ಕುಟುಂಬ ಸಮೇತರಾಗಿ ಬಂದಿದ್ದರು. ಗೌರ್ ನಗರದಲ್ಲಿರುವ ಗೌರ್ ಸರೋವರ್ ಪೋರ್ಟಿಕೋ ಹೋಟೆಲ್ ಗೆ ತೆರಳುವ ಸಲುವಾಗಿ ಅವರು ಕ್ಯಾಬ್ ಬುಕ್ ಮಾಡಿದ್ದು, ಈ ವೇಳೆ ಆಭರಣಗಳಿದ್ದ ಬ್ಯಾಗನ್ನು ಮರೆತು ಅಲ್ಲಿಯೇ ಬಿಟ್ಟಿದ್ದಾರೆ.
ಹೋಟೆಲ್ ರೂಮಿಗೆ ಹೋಗಿ ಪರಿಶೀಲಿಸಿದಾಗ ಆಭರಣಗಳಿದ್ದ ಬ್ಯಾಗ್ ಬಿಟ್ಟಿರುವುದು ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಕಾರ್ಯ ಪ್ರವೃತ್ತರಾದ ಅವರುಗಳು ಕ್ಯಾಬ್ ಕಂಪನಿ ಮೂಲಕ ಅದು ಹೋಗುತ್ತಿದ್ದ ಸ್ಥಳದ ಮಾಹಿತಿ ಪಡೆದುಕೊಂಡಿದ್ದಾರೆ.
ಲೊಕೇಶನ್ ನಲ್ಲಿ ಉಬರ್ ಕ್ಯಾಬ್ ಗಾಜಿಯಾಬಾದ್ ಜಿಲ್ಲೆಯಲ್ಲಿ ಸಂಚರಿಸುತ್ತಿರುವುದು ಕಂಡುಬಂದಿದ್ದು, ಕೂಡಲೇ ಅಲ್ಲಿನ ಪೊಲೀಸರ ಸಹಕಾರದಿಂದ ಕ್ಯಾಬ್ ತಡೆದು ಪರಿಶೀಲಿಸಿದಾಗ ಬ್ಯಾಗ್ ಇರುವುದು ಕಂಡು ಬಂದಿದೆ. ಆದರೆ ಬ್ಯಾಗ್ ಕುರಿತು ಚಾಲಕನಿಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಲಾಗಿದ್ದು, ಬಳಿಕ ಅನಿವಾಸಿ ಭಾರತೀಯ ನಿಖಿಲೇಶ್ ಅವರನ್ನು ಕರೆಯಿಸಿ ಅವರಿಗೆ ತಲುಪಿಸಲಾಗಿದೆ.