ಭಾರತದೊಳಗೆ ಭಯೋತ್ಪಾದಕರನ್ನು ಅಕ್ರಮವಾಗಿ ಗಡಿ ಮೂಲಕ ಕಳುಹಿಸಿ ವಿದ್ವಂಸಕ ಕೃತ್ಯ ನಡೆಸಲು ಕುಮ್ಮಕ್ಕು ನೀಡುತ್ತಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಈಗಾಗಲೇ ತಕ್ಕ ಉತ್ತರ ನೀಡಿದೆ. ಹೀಗಾಗಿ ಗಡಿ ಭಾಗದಲ್ಲಿ ಅಕ್ರಮ ನುಸುಳುಕೋರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಇದರ ಜೊತೆಗೆ ಬಾಂಗ್ಲಾ ದೇಶದಿಂದಲೂ ಅಕ್ರಮವಾಗಿ ಭಾರತಕ್ಕೆ ಪ್ರವೇಶ ಮಾಡಲಾಗುತ್ತಿದ್ದು, ಇದಕ್ಕೂ ಸಹ ಕಡಿವಾಣ ಹಾಕಲಾಗಿದೆ. ಗಡಿಯುದ್ದಕ್ಕೂ ತಂತಿ ಬೇಲಿಯನ್ನು ನಿರ್ಮಾಣ ಮಾಡಲಾಗಿದ್ದು, ಇದರ ಮಧ್ಯೆ ಗಡಿ ಭದ್ರತಾ ಪಡೆ ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮಹತ್ವದ ಯೋಜನೆಯೊಂದನ್ನು ರೂಪಿಸಿದೆ.
ಪಾಕಿಸ್ತಾನ ಹಾಗೂ ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಗಡಿಯಲ್ಲಿ ಉದ್ದಕ್ಕೂ ಸಿಸಿ ಟಿವಿ ಕಣ್ಗಾವಲು ಇರಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ 5,500 ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲು ಸಿದ್ಧತೆ ನಡೆಸಲಾಗಿದೆ. ಈ ಯೋಜನೆ ಜಾರಿಗಾಗಿ ಕೇಂದ್ರ ಸರ್ಕಾರ ಈಗಾಗಲೇ 30 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದು ತಿಳಿದುಬಂದಿದೆ.